ಬೆಂಗಳೂರು: ಕಾವೇರಿ ನದಿ ನೀರಿನ ನಮ್ಮ ಹಕ್ಕಿನ ಪಾಲು ಪಡೆಯಲು, ವಿಫಲರಾದ ಕಾಂಗ್ರೆಸ್ ನಾಯಕರು, ಸಂಗಮದ ದಂಡೆಯಲ್ಲಿ ಮಂಡಿಯೂರಿ ಜನತೆಯ ಕ್ಷಮೆ ಯಾಚಿಸಬೇಕು, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.
ಕೋವಿಡ್ ಮಾರಿಯ ಸೋಂಕಿನ ವಾತಾವರಣದ ನಡುವೆಯೂ, ಕಾನೂನನ್ನು ಲೆಕ್ಕಿಸದೆ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾಂಗ್ರೆಸ್ ನಾಯಕರ ವಿರುದ್ಧ, ಅಲ್ಲಿನ ಜಿಲ್ಲಾಡಳಿತ ಕ್ರಮ ತೆಗೆದು ಕೊಳ್ಳುತ್ತದೆ. ಕಾಂಗ್ರೆಸ್ ನಾಯಕರ ನಡವಳಿಕೆ ಅತ್ಯಂತ ಬೇಜವಾಬ್ದಾರಿ ಎಂದಿದ್ದಾರೆ.
ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತಿದೆ, ಎಂದ ಸಚಿವರು ಕಾಂಗ್ರೆಸ್ ನಾಯಕರು ನೀರಿನ ಮೇಲೆ ರಾಜಕೀಯ ಮಾಡಲು ಹೊರಟಿದ್ದಾರೆ, ಆದರೆ ಜನತೆ ಬುದ್ದಿವಂತರು, ಇವರ ನಾಟಕವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದರು.
ಮೇಕೆದಾಟು ಯೋಜನೆ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದಾಗ ನಿರ್ಲಕ್ಷ್ಯ ವಹಿಸಿದ್ದಾರೆ, ಈಗ ಮುಂದಿನ ಚುನಾವಣೆ ದೃಷ್ಟಿಯಿಂದ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ:ಕ್ಯಾಪ್ಟನ್ಸಿಗೆ ಪಾದಯಾತ್ರೆ, ಕಂಟ್ರೋಲ್ ಮಾಡಾಕ್ ಕರ್ಫ್ಯೂ !
ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ನಮ್ಮ ಸರಕಾರ ಬದ್ದ, ಇದರಲ್ಲಿ ಯಾವುದೇ ಸಂಶಯ ಬೇಡ. ವಿವಾದ ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ಮುಂದಿದೆ ಎಂದರು.
ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದಾಗ, ಐದು ವರ್ಷದಲ್ಲಿ ಕೇವಲ ಡಿ ಪಿ ಆರ್ ಸಲ್ಲಿಸಿದ್ದು ಬಿಟ್ಟರೆ, ಬೇರೆ ಏನೂ ಮಾಡಲಿಲ್ಲ ಎಂದು ಆರಗ ಜ್ಞಾನೇಂದ್ರ ಟೀಕಿಸಿದರು.