ಬೆಂಗಳೂರು: ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ನಾಯಕರ ಪಾದಯಾತ್ರೆ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಮುಗಿಸಲು ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ. ಇನ್ನು 10 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ನಂತರ ರಾಜ್ಯವು ಕಾಂಗ್ರೆಸ್ ಮುಕ್ತ ಆಗಲಿದೆ ಎಂದು ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ಅಧಿಕಾರಕ್ಕಾಗಿ ನಡೆಯುತ್ತಿದೆ. ರಾಜ್ಯ, ರಾಷ್ಟ್ರ ಮತ್ತು ಬಿಬಿಎಂಪಿಯಲ್ಲಿ ಕಾಂಗ್ರೆಸ್ ಸುದೀರ್ಘ ಅವಧಿಯಲ್ಲಿ ಅಧಿಕಾರ ಅನುಭವಿಸಿದೆ. ಆಗ ಮೇಕೆದಾಟು ಯೋಜನೆ ಅನುಷ್ಠಾನ ಮಾಡಿ ಬೆಂಗಳೂರಿಗೆ ನೀರು ಕೊಡಬೇಕೆಂದು ಅವರಿಗೆ ಅನಿಸಲಿಲ್ಲ. ಇವತ್ತು ಪಾದಯಾತ್ರೆಯ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕರಾವಳಿಯಲ್ಲಿ ನಡೆಯುವ ಕಂಬಳಕ್ಕೆ ಜೋಡು ಕೋಣಗಳನ್ನು ಕಟ್ಟಿ ನೋಡಿಕೊಳ್ಳಲು ಒಬ್ಬರನ್ನು ಬಿಡಲಾಗುತ್ತದೆ. ಅದೇ ಮಾದರಿಯಲ್ಲಿ ಸುರ್ಜೇವಾಲರನ್ನು ಬಿಟ್ಟಿದ್ದಾರೆ. ನಮ್ಮವರು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಜೈಲಿಗೆ ಹೋಗಿದ್ದಾರೆ. ಆದರೆ, ಕಾಂಗ್ರೆಸ್‌ನವರು ಲೂಟಿ ಮಾಡಿ ಜೈಲಿಗೆ ಹೋದವರು. ಪಂಚರಾಜ್ಯ ಚುನಾವಣಾ ಫಲಿತಾಂಶ ಬಂದ ಬಳಿಕ ರಾಜ್ಯದ ಅರ್ಧ ಕಾಂಗ್ರೆಸ್ ಖಾಲಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಲಿನ ಜೊತೆ ಸಕ್ಕರೆ ಸೇರಿದರೆ ಹಾಲು ಮಾತ್ರ ಕಾಣುತ್ತದೆ. ಸಕ್ಕರೆ ಕಾಣುವುದಿಲ್ಲ. ಆದರೆ, ಆ ಹಾಲು ಸಿಹಿಯಾಗುತ್ತದೆ. ಅದೇ ರೀತಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಅವರ ನೇತೃತ್ವದ ತಂಡ ಮುಂದೆ ದೇವನಹಳ್ಳಿಯಲ್ಲಿ ಸಿಹಿ ನೀಡಲಿದೆ ಎಂದು ವಿಶ್ವಾಸದಿಂದ ನುಡಿದರು.
ಸಮಾಜ, ಪಕ್ಷ ನಿಮ್ಮನ್ನು ಸ್ವೀಕರಿಸಿ ನೀವು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ. ಹಿಂದೆ ಪರಿವಾರ ವಾದಿಯಾಗಿದ್ದ ನೀವೀಗ ರಾಷ್ಟ್ರೀಯವಾದಿಯಾಗಿದ್ದೀರಿ ಎಂದು ಸೇರ್ಪಡೆಗೊಂಡವರಿಗೆ ತಿಳಿಸಿದರಲ್ಲದೆ, ವ್ಯಕ್ತಿಗಿಂತ ಪಕ್ಷ ಶ್ರೇಷ್ಠ. ಪಕ್ಷಕ್ಕಿಂತ ದೇಶ ಶ್ರೇಷ್ಠ ಎಂಬ ಚಿಂತನೆ ನಮ್ಮದು ಎಂದರು.
ಸ್ವಾತಂತ್ರ್ಯ ಬರುವ ವರೆಗೆ ಕಾಂಗ್ರೆಸ್‌ನಲ್ಲಿ ಭಾರತ್ ಮಾತಾ ಕಿ ಜೈ ಘೋಷಣೆ ಇತ್ತು. ಅನಂತರ ಅದು ಇಂದಿರಾ ಗಾಂಧಿ ಕೀ ಜೈ, ಸೋನಿಯಾ ಗಾಂಧಿ ಕಿ ಜೈ, ರಾಹುಲ್ ಗಾಂಧಿ ಕಿ ಜೈ ಎಂದು ಬದಲಾಗಿದೆ. ಕಾಂಗ್ರೆಸ್‌ನವರು ಯಾರೂ ಈಗ ದೇಶಕ್ಕೆ ಜಯಕಾರ ಕೂಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಜನತಾದಳದಲ್ಲೂ ದೇಶದ ಪರವಾಗಿ ಘೋಷಣೆ ಕೇಳಿದ್ದು ಅಪರೂಪ. ಅವುಗಳು ವ್ಯಕ್ತಿನಿಷ್ಠ ಪಕ್ಷಗಳಾದರೆ, ನಮ್ಮದು ದೇಶಭಕ್ತ ಪಕ್ಷ. ಸಿದ್ಧಾಂತ- ವಿಚಾರದ ಅಡಿಯಲ್ಲಿ ನಮ್ಮ ಪಕ್ಷ ಬೆಳೆದಿದೆ. ಹತ್ತಾರು ಜನರ ಬಲಿದಾನದಿಂದ ನಾವೀಗ ಆನಂದದಿಂದ ಅಧಿಕಾರ ಅನುಭವಿಸುತ್ತಿದ್ದೇವೆ ಎಂಬ ಅರಿವು ನಮ್ಮಲ್ಲಿದೆ. ಪಕ್ಷಕ್ಕಾಗಿ ದುಡಿಯಿರಿ ಎಂದು ಕಿವಿಮಾತು ಹೇಳಿದರು. ಕರ್ತವ್ಯ ಮತ್ತು ಕಾರ್ಯವನ್ನು ಗಮನಿಸಿ ಇಲ್ಲಿ ಅಧಿಕಾರ ಕೊಡಲಾಗುತ್ತದೆ. ಅವಕಾಶವನ್ನು ಉಪಯೋಗಿಸಿಕೊಂಡು ಬೆಳೆಯಿರಿ ಎಂದು ತಿಳಿಸಿದರು.