ಚೆನ್ನೈ: ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಪಕ್ಷದ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಸಲಹೆ ನೀಡಿದ್ದ ತಮಿಳುನಾಡು ಕಾಂಗ್ರೆಸ್ ಪಕ್ಷದ ವಕ್ತಾರರನ್ನು ವಜಾಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಕಾಫಿಯೂ ಕುಡಿಸದ ನೀವು ಗೆಲ್ಲುವುದು ಹೇಗೆ? ಸ್ಪೀಕರ್ ಕಾಗೇರಿಗೆ ಸಹಕಾರಿ ಸಚಿವರ ಹಾಸ್ಯ ಪ್ರಶ್ನೆ
“ ಮಮತಾ ಬ್ಯಾನರ್ಜಿ, ಜಗನ್ ಮೋಹನ್ ರೆಡ್ಡಿ ಮತ್ತು ಕೆ.ಚಂದ್ರಶೇಖರ್ ರಾವ್ ಅವರಂತಹ ನಾಯಕರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳುವ ಮೂಲಕ ಜನರಲ್ಲಿ ವಿಶ್ವಾಸವನ್ನು ಪುನರ್ ಸ್ಥಾಪಿಸಬೇಕಾಗಿದೆ” ಎಂದು ಎಐಸಿಸಿ ಸದಸ್ಯ, ತಮಿಳುನಾಡು ಕಾಂಗ್ರೆಸ್ ವಕ್ತಾರ ಅಮೆರಿಕಾಯ್ ವಿ. ನಾರಾಯಣನ್ ಅಭಿಪ್ರಾಯವ್ಯಕ್ತಪಡಿಸಿದ್ದರು.
ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಮುಂಚೂಣಿಯಲ್ಲಿರಬೇಕು. ಆದರೆ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಕಾಂಗ್ರೆಸ್ ಪಕ್ಷದ ಹುದ್ದೆಯಿಂದ ದೂರ ಇರಬೇಕು. ರಾಹುಲ್ ಗಾಂಧಿಯನ್ನು ನಾನು ಇಷ್ಟಪಡುತ್ತೇನೆ. ಆದರೆ ದುರಾದೃಷ್ಟವಶಾತ್ ಅವರಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ ಎಂದು ನಾರಾಯಣನ್ ಹೇಳಿದರು.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯ ಐಡಿಯಾಗಳನ್ನು ಜನರು ಈಗಾಗಲೇ ತಿರಸ್ಕರಿಸಿದ್ದಾರೆ. ಪಂಚ ರಾಜ್ಯ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ತೀವ್ರ ಮುಖಭಂಗ ಅನುಭವಿಸಿದೆ. ಹೀಗಾಗಿ ರಾಹುಲ್, ಪ್ರಿಯಾಂಕಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದರು.
ಸೋನಿಯಾ ಗಾಂಧಿಗೆ ಅನುಭವ ಇದೆ. ಪಕ್ಷದ ನಿರ್ಧಾರ ತೆಗೆದುಕೊಳ್ಳುವ ಸಮಿತಿಯಲ್ಲಿ ಸೋನಿಯಾ ಗಾಂಧಿ ಅವರು ಇರಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಅದೇ ರೀತಿ ರಾಹುಲ್ ಮತ್ತು ಪ್ರಿಯಾಂಕಾ ದೂರ ಉಳಿಯಲಿ ಎಂದು ಮನವಿ ಮಾಡಿಕೊಳ್ಳುವುದಾಗಿ ತಮಿಳುನಾಡು ಕಾಂಗ್ರೆಸ್ ಮುಖಂಡ ನಾರಾಯಣನ್ ತಿಳಿಸಿದ್ದರು.