Advertisement

ಎಸ್‌.ಆರ್‌. ಪಾಟೀಲ ಆರೋಪ ನಿರಾಧಾರ

04:04 PM May 10, 2022 | Team Udayavani |

ಬ್ಯಾಡಗಿ: ಕಾಂಗ್ರೆಸ್‌ ಮುಖಂಡ ಎಸ್‌.ಆರ್‌. ಪಾಟೀಲ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನನ್ನ ಕುಟುಂಬಕ್ಕೆ ಸೇರಿದವರು ಯಾವ ಕಾಮಗಾರಿ ಮಾಡಿದ್ದು ಎಂಬುವುದು ದಾಖಲೆ ಸಮೇತ ಸಾಬೀತುಪಡಿಸವಂತೆ ಸವಾಲೆಸೆದ ಅವರು, ಈ ಕುರಿತು ಬಹಿರಂಗ ಚರ್ಚೆಗೂ ಸಿದ್ಧ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿರುಗೇಟು ನೀಡಿದ್ದಾರೆ.

Advertisement

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಅವಧಿಯಲ್ಲಿನ ಹಗರಣ ಬಯಲೆಗೆಳೆದರೆ ಪಾಟೀಲರು ರಾಜಕಾರಣದಲ್ಲಿ ಮುಂದುವರೆಯಲು ಕಷ್ಟವಾಗುತ್ತದೆ. ಅಷ್ಟೇ ಏಕೆ ಗಾಂಧಿ ಯಾರು? ಗೋಡ್ಸೆ ಯಾರು? ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಅಧಿಕಾರವಿಲ್ಲದೇ ಹತಾಶೆ ಮನೋಭಾವನೆಯಿಂದ ಇಂತಹ ಹೇಳಿಕೆ ನೀಡಿದ್ದಾರೆ ಎಂದರು.

40 ಪರ್ಸೆಂಟ್‌ ಕಮೀಶನ್‌ ಕೊಟ್ಟ ಗುತ್ತಿಗೆದಾರರನ್ನು ಕೂರಿಸಿಕೊಂಡು ದಾಖಲೆ ಸಮೇತ ಸುದ್ದಿಗೋಷ್ಠಿ ನಡೆಸಲಿ. ಬಳಿಕ ಉತ್ತರಿಸಲಿದ್ದೇನೆ. ಮೊದಲಿನಿಂದಲೂ ನಮ್ಮದ್ದು ಗುತ್ತಿಗೆದಾರರ ಕುಟುಂಬ. ನಾನು ಶಾಸಕನಾದ ಮೇಲೆ ಸಹೋದರರು ಅಥವಾ ಮಕ್ಕಳು ಯಾವುದೇ ಕಾಮಗಾರಿ ಗುತ್ತಿಗೆ ಪಡೆದಿಲ್ಲ. ಪಡೆದಿರುವ ಬಗ್ಗೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಕೇವಲ ಗಾಳಿಯಲ್ಲಿ ಗುಂಡು ಹೊಡೆಯುವುದು ಅವರ ಘನತೆಗೆ ತಕ್ಕುದಲ್ಲ ಎಂದರು.

ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಹಗರಣ ನಡೆದಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಪ್ರತಿ ಗ್ರಾಮದಲ್ಲಿಯೂ ಕೆರೆ ಬಳಕೆದಾರರ ಸಂಘಕ್ಕೆ ಹಣವನ್ನು ವರ್ಗಾವಣೆ ಮಾಡಿಸಿ ಅವರಿಂದಲೇ ಕಾಮಗಾರಿ ನಡೆಸಲಾಗುತ್ತಿದೆ. ಈ ಕುರಿತು ಅಧಿಕಾರಿಗಳಿಂದ ತಪಾಸಣೆ ಮಾಡಿಸಿ ತಪ್ಪು ಸಾಬೀತಾದಲ್ಲಿ ಹೊಣೆಯಾಗುತ್ತೇನೆ. ಸತ್ಯಾಸತ್ಯತೆ ತಿಳಿದುಕೊಂಡು ಸುದ್ದಿಗೋಷ್ಠಿ ನಡೆಸಬಹುದಿತ್ತು ಎಂದರು.

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಪಟ್ಟಣದಲ್ಲಿ 500 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಬಡವರಿಗಾಗಿ ಮತ್ತೆ ಒಂಬತ್ತೂವರೆ ಎಕರೆ ಭೂಮಿ ಖರೀದಿಸಲು ನಿರ್ಧರಿಸಿದ್ದು, ಮೊದಲಿದ್ದ 10 ಎಕರೆ ಭೂಮಿಯಲ್ಲಿ 633 ಫಲಾನುಭವಿಗಳಿಗೆ ಮನೆ ನೀಡಲು ಸಿದ್ಧತೆ ನಡೆಸಲಾಗಿದ್ದು, ಅವರಿಂದ ಮುಂಗಡ ಹಣ ಕಟ್ಟಿಸಿಕೊಳ್ಳಲಾಗುತ್ತಿದೆ ಎಂದರು.

Advertisement

ಕೆಲ ಕಾಮಗಾರಿಗಳಲ್ಲಿ ಗುಜ್ಜರಿ ಕಬ್ಬಿಣ ಬಳಸಲಾಗಿದೆ ಎಂಬ ಆರೋಪ ನಿರಾಧಾರವಾಗಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ವಿಶ್ವಾಸವಿದೆ. ಎಲ್ಲಿಯೂ ಅಂತ ಕೆಲಸ ನಡೆದಿಲ್ಲ. ಅವರಲ್ಲಿ ದಾಖಲೆಯಿದ್ದರೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ದಾಖಲೆಯೊಂದಿಗೆ ಮಾತನಾಡಬೇಕಿತ್ತು ಎಂದರು.

ಪಟ್ಟಣದಲ್ಲಿರುವ ರಾಜ ಕಾಲುವೆ ಅಭಿವೃದ್ಧಿಗೆ 16 ಕೋಟಿ ರೂ. ಬಿಡುಗಡೆಯಾಗಿದೆ ಎಂಬುದು ಶುದ್ಧ ಸುಳ್ಳು. ರಾಜಕಾಲುವೆ ಕಾಮಗಾರಿಗೆ ಇಂದಿಗೂ ಹಣವೇ ಬಿಡುಗಡೆಯಾಗಿಲ್ಲ. ಕಾಮಗಾರಿ ಮೊತ್ತ 10 ಕೋಟಿ ರೂ.ಗೆ ನಿಗದಿಯಾಗಿದ್ದು, ಇನ್ನೂ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಈ ಕುರಿತು ನನ್ನನ್ನು ಕೇಳುವ ಬದಲು ಸಂಬಂಧಿಸಿದ ಇಲಾಖೆಗೆ ಪತ್ರ ಬರೆದು ಮಾಹಿತಿ ಪಡೆದುಕೊಳ್ಳಬಹುದಿತ್ತು ಎಂದರು.

ಯುಟಿಪಿಯಿಂದ 36 ಕೋಟಿ ರೂ. ಅನುದಾನ ಬ್ಯಾಡಗಿ ಪುರಸಭೆಗೆ ತಂದಿದ್ದೇನೆ. ಪ್ರಸಕ್ತ ವರ್ಷ ಮತ್ತೆ 5 ಕೋಟಿ ರೂ. ಬಿಡುಗಡೆಯಾಗಲಿದೆ. ಎಲ್ಲ ಕಡೆಯಲ್ಲಿಯೂ ಕಾಮಗಾರಿ ಆರಂಭವಾಗಿವೆ. ಆಧಾರ ರಹಿತ ಆರೋಪ ಸರಿಯಲ್ಲ. ತಮ್ಮ ಸುದೀರ್ಘ‌ ರಾಜಕಾರಣದಲ್ಲಿ ಅಧಿಕಾರ ಸಿಗಲಿಲ್ಲ ಎಂಬ ಹತಾಶೆಯಿಂದ ಇಂತಹ ಹೇಳಿಕೆ ನೀಡಿದ್ದರೂ ನೀಡಿರಬಹುದು. ಬರುವ 2023 ಚುನಾವಣೆಯಲ್ಲಿ ಪಾಟೀಲರಿಗೆ ಜನ ಉತ್ತರಿಸಲಿದ್ದಾರೆ ಎಂದರು.

ಶಂಕ್ರಣ್ಣ ಮಾತನವರ, ಶಿವಬಸಪ್ಪ ಕುಳೇನೂರ, ಎಸ್‌.ಎನ್‌. ಯಮನಕ್ಕರ, ಹಾಲೇಶ್‌ ಜಾಧವ, ದ್ಯಾಮನಗೌಡ್ರ, ವೈ.ಎನ್‌. ಕರೇಗೌಡ್ರು ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next