ಮೈಸೂರು: ಸ್ಥಳೀಯ ಕಾಂಗ್ರೆಸ್ ಮುಖಂಡ,ನಿವೃತ್ತ ಐಪಿಎಸ್ ಅಧಿಕಾರಿ ರೇವಣಸಿದ್ದಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದು ಸಿದ್ದರಾಮಯ್ಯ ವಿರುದ್ಧ ಹೋರಾಟಕ್ಕೆ ಸಿದ್ದವಾಗಿದ್ದಾರೆ.
ನಿನ್ನೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ರೇವಣ ಸಿದ್ದಯ್ಯ ಅವರು ಭಾನುವಾರ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ವಿರುದ್ಧ ಪ್ರಚಾರ ನಡೆಸುವುದಾಗಿ ಘೋಷಿಸಿದ್ದಾರೆ.
ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಜಿ.ಟಿ.ದೇವೇಗೌಡರಿಗೆ ಬೆಂಬಲ ಸೂಚಿಸುವುದಾಗಿ ಹೇಳಿರುವ ಅವರು ವರುಣಾದಲ್ಲಿ ಬಿಜೆಪಿ ಬೆಂಬಲಿಸುವುದಾಗಿ ಹೇಳಿದ್ದಾರೆ.
‘ನನಗೆ ಕಾಂಗ್ರೆಸ್ ಪಕ್ಷದ ಬಗ್ಗೆ ವಿರೋಧ ವಿಲ್ಲ.ಸಿದ್ದರಾಮಯ್ಯ ನನ್ನ ನೇರ ವೈರಿ. ನನ್ನನ್ನು ಸಾಕು ಪ್ರಾಣಿ ರೀತಿ ನೋಡಿಕೊಂಡರು ಈಗ ನನಗೆ ಬಿಸ್ಕತ್ ಹಾಕಲು ಬಂದಿದ್ದಾರೆ’ ಎಂದು ತೀವ್ರ ಅಸಮಾಧಾನ ಹೊರಹಾಕಿದರು.
ಕೆಲ ದಿನಗಳ ಹಿಂದೆ ರೇವಣ್ಣ ಸಿದ್ದಯ್ಯ ಅವರನ್ನು ಭೇಟಿ ಮಾಡಿದ್ದ ಬಿ.ವೈ.ವಿಜಯೇಂದ್ರ, ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ರೇವಣ ಸಿದ್ದಯ್ಯ ಅವರ ತೋಟದ ಮನೆಗೆ ಭೇಟಿಯಿತ್ತ ಡಾ.ಯತೀಂದ್ರ, ಒಂದು ಗಂಟೆಗೂ ಹೆಚ್ಚು ಕಾಲ ಗೌಪ್ಯ ಮಾತುಕತೆ ನಡೆಸಿ, ಕಾಂಗ್ರೆಸ್ ಪಕ್ಷದಲ್ಲೆ ಇರುವಂತೆ ಕೋರಿದ್ದರು.
ಲಿಂಗಾಯತ ಸುಮುದಾಯದ ನಾಯಕರಾಗಿರುವ ರೇವಣ ಸಿದ್ದಯ್ಯ ಅವರು ಚಾಮುಂಡೇಶ್ವರಿ ಮತ್ತು ವರುಣಾದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದು ಕ್ಷೇತ್ರದಲ್ಲಿ ನಡೆಸಬೇಕಾದ ರಣತಂತ್ರಗಳನ್ನೂ ಬಲ್ಲವರಾಗಿದ್ದಾರೆ.