Advertisement

ಕುತೂಹಲಕ್ಕೆ ಎಡೆಮಾಡಿದ ಆರ್.ವಿ.ದೇಶಪಾಂಡೆಯವರ ರಾಜಕೀಯ ನಡೆ

11:46 AM Jan 23, 2022 | Team Udayavani |

ದಾಂಡೇಲಿ : ಹಳಿಯಾಳದಿಂದ ರಾಷ್ಟ್ರದ ರಾಜಧಾನಿಯವರೆಗೆ ತನ್ನ ಹಿಡಿತ ಸಾಧಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆಯವರಿಗೆ ಮುಂಬರಲಿರುವ ವಿಧಾನ ಸಭಾ ಚುನಾವಣೆ ಜೀವನದ ಕಟ್ಟಕಡೆಯ ಚುನಾವಣೆ. ಆದಾಗ್ಯೂ ಮುಂಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆಯಾದರೂ ವಯಸ್ಸು ಅಡ್ಡ ಬಂದರೆ ಹೊಸಮುಖಕ್ಕೆ ಅವಕಾಶ ದೊರೆಯಬಹುದು.

Advertisement

ಸಾಮಾನ್ಯ ತಾಲೂಕಿನಲ್ಲಿ ಹುಟ್ಟಿ, ರಾಜಕೀಯವಾಗಿ ಹಂತ ಹಂತವಾಗಿ ಬೆಳೆದು, ರಾಜ್ಯ, ರಾಷ್ಟ್ರಮಟ್ಟದಲ್ಲಿ ತನ್ನ ವರ್ಚಸ್ವಿ ಗುಣಗಳಿಂದಲೆ ಗುರುತಿಸಿಕೊಂಡ ಮುತ್ಸದಿ ಜನನಾಯಕ. ಅತೀ ಹೆಚ್ಚು ಬಾರಿ ಸಚಿವರಾಗಿದ್ದ ಹೆಗ್ಗಳಿಕೆಗೆ ಪಾತ್ರರಾದವರು. ಜಿಲ್ಲೆಯ ಕಾಂಗ್ರೆಸಿಗೆ ಅನಭಿಷಿಕ್ತ ದೊರೆ ಎಂದರೆ ತಪ್ಪಾಗಲಾರದು. ರಾಜ್ಯ ವಿಧಾನ ಸಭೆಯಲ್ಲಿ ಯಡಿಯೂರಪ್ಪನವರಂತೆ ಹಿರಿಯ ಸದಸ್ಯರು ಹೌದು. ವಿಧಾನ ಸಭೆಗೆ 9 ಬಾರಿ ಸ್ಪರ್ಧಿಸಿ, 8 ಬಾರಿ ಗೆದ್ದವರು.

ಇಡೀ ರಾಜ್ಯದಲ್ಲೆ ಅತೀ ಹೆಚ್ಚು ಪ್ರಮಾಣದಲ್ಲಿ ಸಿ.ಎಸ್.ಆರ್ ಯೋಜನೆಯಡಿ ಅನುದಾನ ಬಂದಿದೆ ಎಂದಾದರೆ ಅದು ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರಕ್ಕೆ ಎನ್ನುವುದನ್ನು ವಿರೋಧ ಪಕ್ಷದವರೂ ಒಪ್ಪಿಕೊಳ್ಳಲೆಬೇಕು.

ಹಳಿಯಾಳದಂತಹ ಪುಟ್ಟ ಪಟ್ಟಣದಿಂದ ದಿಲ್ಲಿಯವರೆಗೆ ಬೆಳೆದಿರುವ ದೇಶಪಾಂಡೆಯವರು ಎಲ್ಲ ಧರ್ಮಿಯರ ಜೊತೆ ಸಮನ್ವಯತೆಯಲ್ಲಿದ್ದರೂ, ಅವರ ಇಷ್ಟೆಲ್ಲ ರಾಜಕೀಯ ಬೆಳವಣಿಗೆಗೆ ಪ್ರಮುಖ ಕಾರಣೀಕರ್ತರಾದ ಮರಾಠಾ ಸಮುದಾಯ ಮತ್ತು ಮುಸ್ಲಿಂ ಸಮುದಾಯದ ಋಣ ಬಹಳಷ್ಟಿದೆ. ಇಷ್ಟು ವರ್ಷಗಳ ರಾಜಕೀಯ ಬೆಳವಣಿಗೆಗೆ ಕಾರಣೀಕರ್ತರಾದ ಮರಾಠಾ ಸಮುದಾಯಕ್ಕೆ ಮತ್ತು ಮುಸ್ಲಿಂ ಸಮುದಾಯಕ್ಕೆ ರಾಜಕೀಯವಾಗಿ ಮಹತ್ವದ ಋಣ ತೀರಿಸಲು ಇದೀಗ ಸುವರ್ಣಕಾಲ ಎಂದೆ ವಿಶ್ಲೇಷಿಸಲಾಗುತ್ತಿದೆ.

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ವಯಸ್ಸು ಅಡ್ಡಿಯಾಯಿತೆಂದರೇ, ಮಗ ಪ್ರಶಾಂತ್ ದೇಶ ಪಾಂಡೆ ಅವರನ್ನು ಯಲ್ಲಾಪುರ ಕ್ಷೇತ್ರದಲ್ಲಿ ಕಣಕ್ಕಿಳಿಸಿ, ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ತನ್ನ ಪರವಾಗಿ ಮರಾಠಾ ಸಮಾಜ ಇಲ್ಲವೆ ಮುಸ್ಲಿಂ ಸಮುದಾಯಕ್ಕೆ ಸ್ಪರ್ಧಿಸಲು ಅವಕಾಶ ನೀಡುವುದರ ಮೂಲಕ ತನ್ನ ರಾಜಕೀಯ ಅಭ್ಯುದಯಕ್ಕೆ ನೀಡಿದ ಕೊಡುಗೆಯ ಋಣವನ್ನು ತೀರಿಸಲು ದೇಶಪಾಂಡೆಯವರು ಮುಂದಾದರೂ ಅಚ್ಚರಿ ಪಡಬೇಕಿಲ್ಲ.

Advertisement

ಆರದ ರಾಜಕೀಯ ಚಟುವಟಿಕೆಗೆ 76ರ ಉತ್ಸಾಹ ಅಡ್ಡಿಯಾಗದಿದ್ದಲ್ಲಿ ದೇಶಪಾಂಡೆಯವರೇ ಸ್ಪರ್ಧಿಸಬಹುದಾದರೂ ಅದು ಹಗ್ಗದ ಮೇಲಿನ ಸೈಕಲ್ ಸವಾರಿ ಎಂಬಂತಹ ವಾತವರಣ ಸದ್ಯ ಕ್ಷೇತ್ರದಲ್ಲಿರುವುದು ಸುಳ್ಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next