ಉಡುಪಿ: ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದು, ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿದೆ.
ಮಣಿಪಾಲದ ಕಂಟ್ರಿ ಇನ್ ಹೊಟೇಲ್ ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾಗಿ, ಚರ್ಚೆ ನಡೆಸಿದರು.
“ಉತ್ತರ ಕರ್ನಾಟಕ ಭಾಗದ ಮೀನುಗಾರರಿಗೆ ಜಾತಿ ಪ್ರಮಾಣ ಪತ್ರ ಸಿಗದೆ ಅನ್ಯಾಯವಾಗುತ್ತಿದೆ. ಅದರ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿದ್ದೇನೆ. ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸಿಎಂ ಭರವಸೆ ಕೊಟ್ಟಿದ್ದಾರೆ” ಎಂದರು.
ಬಿಜೆಪಿ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಬಗ್ಗೆ ಮುಹೂರ್ತ ಯಾರು ನಿಗದಿ ಮಾಡುತ್ತಿದ್ದಾರೆ, ಯಾರು ಪ್ರಚಾರ ಮಾಡುತ್ತಿದ್ದಾರೆಂದು ನನಗೆ ಗೊತ್ತಿಲ್ಲ. ಈಗ ನನ್ನನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷನನ್ನಾಗಿ ಮಾಡಿದ್ದಾರೆ. ಮುಂದೆ ಏನಾಗುತ್ತದೆ ಎಂದು ನೋಡೋಣ” ಎಂದರು.
ಇದನ್ನೂ ಓದಿ:ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಆಗಲು ಬಿಡುವುದಿಲ್ಲ: ಅರುಣ್ ಸಿಂಗ್
“ಕೆಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷನಾದ ಮೇಲೆ ಉಪಾಧ್ಯಕ್ಷ ಹುದ್ದೆಯೇ ದೊಡ್ಡದು. ಪಕ್ಷದಲ್ಲಿ ಈ ಹಿಂದೆ ನಾನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಅಲ್ಲಿಂದ ನನಗೆ ಉಪಾಧ್ಯಕ್ಷ ಹುದ್ದೆಗೆ ಪ್ರಮೋಶನ್ ನೀಡಲಾಗಿದೆ” ಎಂದರು.
ಪ್ರಮೋಧ್ ಮಧ್ವರಾಜ್ ಬಿಜೆಪಿಗೆ ಬಂದರೆ ನನಗೂ ಸಂತೋಷ ಎಂಬ ಶಾಸಕ ರಘುಪತಿ ಭಟ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, “ಅವರಿಗೆ ಸಂತೋಷವಾದರೆ ನನಗೂ ಸಂತೋಷ” ಎಂದರು.