ವಿಟ್ಲ: ಪಂಚಾಯತ್ ಸದಸ್ಯರ ಧ್ವನಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಪಂಚಾಯತ್ ರಾಜ್ ಬಗ್ಗೆ ಅಧ್ಯಯನ ಮಾಡಿ, ಸಮರ್ಪಕ ಜ್ಞಾನ ಹೊಂದಿದವರು. ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಸೇರಿಸುವ ಕಾರ್ಯ ಮಾಡಬೇಕು. ಗಾಂಧಿ ಹೆಸರಲ್ಲಿ ಬದುಕಿದ ಕಾಂಗ್ರೆಸ್ ಗ್ರಾಮ ಸ್ವರಾಜ್ ಕಲ್ಪನೆಗೆ ಜೀವ ತುಂಬಲಿಲ್ಲ. 2023ರ ಚುನಾವಣೆ ಮುಂಚೆ ಕಾಂಗ್ರೆಸ್ ಎರಡು ಹೋಳಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಬಿ.ಜೆ.ಪಿ. ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಸೋಮವಾರ ಕಬಕ ಇಡ್ಕಿದು ಸೊಸೈಟಿ ಸಭಾಭವನದಲ್ಲಿ ಭಾರತೀಯ ಜನತಾ ಪಕ್ಷ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ಪುಣಚ ಮಹಾಶಕ್ತಿ ಕೇಂದ್ರದ ಆಶ್ರಯದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಮಾತನಾಡಿ ಕಾರ್ಯಕರ್ತರ ಶ್ರಮದಿಂದ ನಾವು ಎತ್ತರಕ್ಕೆ ಏರಲು ಸಾಧ್ಯವಾಗಿದೆ. ಸಂಘಟನೆಯಲ್ಲಿ ವಿಶ್ವಾಸವನ್ನು ಮೂಡಿಸಿ, ವಿರೋಧಿಗಳಿಗೆ ಬಲ ತೋರಿಸುವ ಅಗತ್ಯವಿದೆ. ಜನ ಅಧಿಕಾರವನ್ನು ನೀಡಿದಾಗ ಅಭಿವೃದ್ಧಿಯನ್ನು ಮಾಡಿ ತೋರಿಸಬೇಕು. ಅಭ್ಯರ್ಥಿ ಎಷ್ಟೇ ಇರಬಹುದು, ಆದರೆ ನಾವು ಒಂದೇ ಮತವನ್ನು ಕೊಡಬೇಕು. ಅದು ಒಂದನೇ ಕ್ರಮಾಂಕದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರೇ ಆಗಿರಬೇಕು ಎಂದರು.
ವಿಟ್ಲ ಪಟ್ಟಣ ಪಂಚಾಯತ್ ಭಾಗದ ಮಾಜಿ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ, ಸುಂದರ ನಾಯ್ಕ, ವಿನಯ ಕುಮಾರ್, ಪದ್ಮನಾಭ ಶೆಟ್ಟಿ, ಮಹೇಶ ಗೌಡ ಸೇರಾಜೆ, ಸತೀಶ್ ನಾಯಕ್ ಹಾಗೂ ಮಾಣಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಗೀತಾ ಪಳನೀರು, ಚಂದ್ರಶೇಖರ ಪಿ. ಅವರು ಬಿಜೆಪಿಗೆ ಸೇರ್ಪಡೆಯಾದರು.
ಮಾಣಿಲ ಬಿಜೆಪಿ ಗ್ರಾಮ ಸಮಿತಿಯ ತೀವ್ರ ವಿರೋಧದ ನಡುವೆಯೂ ಕಾಂಗ್ರೆಸ್ ನಾಯಕ, ಮಾಣಿಲ ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಬಿಜೆಪಿ ಸೇರ್ಪಡೆಗೆ ಗ್ರಾಮದ ಹಿರಿಯ ಬಿಜೆಪಿಗರು ತೀವ್ರ ವಿರೋಧ ವ್ಯಕ್ತ ಪಡಿಸಿದರು. ಕಪ್ಪು ಪಟ್ಟಿ ತೋರಿಸಿ, ಧಿಕ್ಕಾರ ಘೋಷಣೆ ಕೂಗಿ ಪ್ರತಿಭಟಿಸಿದ ಘಟನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಮ್ಮುಖದಲ್ಲಿ ನಡೆಯಿತು.
ಪುತ್ತೂರು ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಸಹ ಪ್ರಭಾರಿ ರಾಜೇಶ್ ಕಾವೇರಿ, ಮಂಡಲ ಪ್ರಭಾರಿ ರಾಮದಾಸ್ ಬಂಟ್ವಾಳ, ವೆಂಕಟ್ ವಳಲಂಬೆ ಮತ್ತಿತರರು ಉಪಸ್ಥಿತರಿದ್ದರು.
ಯಶಸ್ವಿನಿ ಶಾಸ್ತ್ರೀ ಆಶಯಗೀತೆ ಹಾಡಿದರು. ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿ, ಪ್ರಸ್ತಾವನೆಗೈದರು. ಪುಣಚ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು ವಂದಿಸಿದರು. ಪುಣಚ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್ ಕಾರ್ಯಕ್ರಮ ನಿರೂಪಿಸಿದರು. ದೇವದಾಸ ಶೆಟ್ಟಿ ಮತಚಲಾವಣೆಯ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನಡೆಸಿದರು.