Advertisement

ಕಾಂಗ್ರೆಸ್‌ ಹಿರಿಯ ನಾಯಕ ಜೈಪಾಲ್‌ ರೆಡ್ಡಿ ನಿಧನ

08:50 AM Jul 30, 2019 | Team Udayavani |

ಹೈದರಾಬಾದ್‌: ಕಾಂಗ್ರೆಸ್‌ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಎಸ್‌. ಜೈಪಾಲ್‌ ರೆಡ್ಡಿ (77), ಹೈದರಾಬಾದ್‌ನಲ್ಲಿ ಶನಿವಾರ ಮಧ್ಯರಾತ್ರಿ 1:28ರ ಸುಮಾರಿಗೆ ನಿಧನರಾಗಿದ್ದಾರೆ. ಇತ್ತೀಚೆಗೆ, ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

ಅವಿಭಜಿತ ಆಂಧ್ರಪ್ರದೇಶದ ನಲಗೊಂಡ ಜಿಲ್ಲೆಯ ನೆರ್ಮಾಟಾ ಎಂಬ ಕುಗ್ರಾಮದಲ್ಲಿ 1942ರ ಜ. 16ರಂದು ಜನಿಸಿದ್ದರು. ಹೈದರಾಬಾದ್‌ನ ಒಸಾಮಾ ವಿವಿಯಿಂದ ಬಿ.ಎ. ಪದವಿ ಪಡೆದಿದ್ದರು. 18 ತಿಂಗಳ ಮಗುವಾಗಿದ್ದಾಗಲೇ ಪೋಲಿಯೋ ಪೀಡಿತರಾಗಿದ್ದ ಅವರ ಸಾಧನೆಗೆ ಅಂಗವೈಕಲ್ಯ ಅಡ್ಡಿಬರಲಿಲ್ಲ. 70ರ ದಶಕದಲ್ಲಿ ಕಾಂಗ್ರೆಸ್‌ ಸೇರಿದ ಅವರು, 4 ಬಾರಿ ಶಾಸಕರಾಗಿ, 5 ಬಾರಿ ಸಂಸದರಾಗಿ, ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು. ಸಂಸತ್ತಿನಲ್ಲಿ ಉತ್ತಮ ವಾಗ್ಮಿ ಎಂದೇ ಗುರುತಿಸಿಕೊಂಡಿದ್ದರು.

1975ರ “ತುರ್ತು ಪರಿಸ್ಥಿತಿ’ ವಿರೋಧಿಸಿ ಕಾಂಗ್ರೆಸ್‌ನಿಂದ ಹೊರಬಂದಿದ್ದ ಅವರು, 1977ರಲ್ಲಿ ಜನತಾ ಪಕ್ಷ ಸೇರಿದ್ದರು. 1999ರಲ್ಲಿ 21 ವರ್ಷಗಳ ನಂತರ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದರು. ಐ.ಕೆ. ಗುಜ್ರಾಲ್‌, ಮನಮೋಹನ್‌ ಸಿಂಗ್‌ ಮಂತ್ರಿಮಂಡಲಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು, ತೆಲಂಗಾಣ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಬೆಂಬಲಿಸಿದ್ದರು. ಇವರ ನಿಧನಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next