ಕಾಪು: ಅಪರಿಚಿತರ ತಂಡವೊಂದು ಕೊಲೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಮುಖಂಡ ಗುಲಾಂ ಮಹಮ್ಮದ್ ಹೆಜಮಾಡಿ (55) ಅವರ ಕಾರನ್ನು ಬೆನ್ನಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸೇತುವೆ ಬಳಿ ನಡೆದಿದೆ.
ಗುಲಾಂ ಮಹಮ್ಮದ್ ಅವರು ತನ್ನ ಕಾರು ಚಾಲಕ ಆಸೀಫ್ ಮತ್ತು ಮೇಲ್ವಿಚಾರಕ ಅಬೂಬಕ್ಕರ್ ಅವರೊಂದಿಗೆ ಮಣಿಪಾಲದಿಂದ ಹೆಜಮಾಡಿಗೆ ಬರುತ್ತಿದ್ದ ವೇಳೆ ಉದ್ಯಾವರ ಸೇತುವೆಯ ಬಳಿ ಹಿಂದಿನಿಂದ ಬಿಳಿ ಬಣ್ಣದ ಸೆಲೇರಿಯೋ ಕಾರಿನಲ್ಲಿ ಬೆನ್ನಟ್ಟಿಕೊಂಡು ಬಂದಿರುವುದಾಗಿ ದೂರಲಾಗಿದೆ.
ಗುಲಾಂ ಅವರ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆಸುವ ರೀತಿಯಲ್ಲಿ ಕಾರನ್ನು ದುಡುಕುತನದಿಂದ ಚಲಾಯಿಸಿಕೊಂಡು ಹೋಗಿದ್ದರು. ಅಲ್ಲಿಂದ ಕಟಪಾಡಿ ಜಂಕ್ಷನ್ ಬಳಿ ಕಾರನ್ನು ನಿಲ್ಲಿಸಿದಾಗ ಮೂವರು ತಮ್ಮ ಕಾರಿನ ಕಿಟಕಿಯ ಮೂಲಕ ಗುಲಾಂ ಅವರನ್ನು ದುರುಗುಟ್ಟಿಕೊಂಡು ನೋಡುತ್ತಿದ್ದರೆನ್ನಲಾಗಿದೆ.
ಈ ವೇಳೆ ಭಯಗೊಂಡು ಗುಲಾಂ ಮಹಮ್ಮದ್ ಅವರ ಚಾಲಕ ಕಾರನ್ನು ಶಿರ್ವ ರಸ್ತೆ ಕಡೆಗೆ ಚಲಾಯಿಸಿದ್ದು, ಬೆನ್ನಟ್ಟಿಕೊಂಡು ಬಂದಿದ್ದ ಅಪರಿಚಿತ ಕಾರಿನವರು ಮಂಗಳೂರು ಕಡೆಗೆ ತೆರಳಿದ್ದಾರೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಮೂವರು ಅಪರಿಚಿತರು ಗುಲಾಂ ಮಹಮ್ಮದ್ ಅವರನ್ನು ಕೊಲ್ಲುವ ಉದ್ದೇಶದಿಂದ ಹಾಗೂ ಭಯ ಹುಟ್ಟಿಸಲು ಈ ಕೃತ್ಯ ಎಸಗಿರುವುದಾಗಿ ದೂರಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.