ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ವಿಚಾರದಲ್ಲಿ ಕೇಂದ್ರ ಪ್ರಮಾಣಿಕ ಪ್ರಯತ್ನ ನಡೆಸಬೇಕೆಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಇಂದು (ಆ.20) ಸಂಜೆ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಫ್ಘಾನಿಸ್ತಾನದಲ್ಲಿ ರಾಜ್ಯದ ಮೂವರು ಸೇರಿದಂತೆ ಅನೇಕ ಭಾರತೀಯರು ಸಿಲುಕಿಕೊಂಡಿದ್ದಾರೆ. ಉಗ್ರರ ನೆರಳಿನಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡಿರುವ ಭಾರತೀಯರ ರಕ್ಷಣೆ ಕೇಂದ್ರ ಸರ್ಕಾರದ ಕರ್ತವ್ಯ.
ಭಾರತೀಯರನ್ನು ಕರೆತರುವ ವಿಚಾರದಲ್ಲಿ ಕೇಂದ್ರ ಪ್ರಮಾಣಿಕ ಪ್ರಯತ್ನ ನಡೆಸಬೇಕು. ಈ ವಿಚಾರದಲ್ಲಿ ರಾಜ್ಯ ಸರ್ಕಾರವೂ ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದಿದ್ದಾರೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದು, ಷರಿಯಾ ಕಾನೂನಡಿದ ಆಡಳಿತ ನಡೆಸುತ್ತಿದ್ದಾರೆ. ಈ ದೇಶ ಉಗ್ರರ ವಶವಾಗುತ್ತಿದ್ದಂತೆ ಅಲ್ಲಿರುವ ವಿದೇಶಿ ಪ್ರಜೆಗಳನ್ನು ಆಯಾ ದೇಶಗಳು ಏರ್ ಲಿಫ್ಟ್ ಮಾಡುತ್ತಿವೆ. ಭಾರತವು ಕೂಡ ಅಫ್ಘಾನಿಸ್ತಾನದಲ್ಲಿದ್ದ ಅಧಿಕಾರಿಗಳನ್ನು ವಿಶೇಷ ವಿಮಾನದ ಮೂಲಕ ಕಳೆದ ಎರಡು ದಿನಗಳ ಹಿಂದೆ ಕರೆತಂದಿದೆ.
ಇನ್ನು ಎರಡು ದಶಕಗಳ ಬಳಿಕ ಮತ್ತೆ ಅಫ್ಗಾನಿಸ್ತಾನದಲ್ಲಿ ರಾಜಕೀಯ ಅರಾಜಕತೆ ಸೃಷ್ಠಿಯಾಗಿದ್ದು, ತಾಲಿಬಾನಿಗಳ ಅಟ್ಟಹಾಸಕ್ಕೆ ಅಲ್ಲಿಯ ಜನರು ನಲಗುವಂತಾಗಿದೆ. ಹೀಗಾಗಿ ಅಫ್ಘಾನ್ ನಿವಾಸಿಗಳು ದೇಶ ಬಿಟ್ಟು ಪಲಾಯನ ಮಾಡುತ್ತಿದ್ದಾರೆ. ಕೆಲವು ಸಂಘಟನೆಗಳು ತಾಲಿಬಾನಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಕೂಡ ನಡೆಸುತ್ತಿವೆ.