Advertisement

ಆಕ್ಸಿಜನ್ ದುರಂತ ಮಂಡ್ಯದಲ್ಲಿ ನಡೆದಿದ್ದರೆ ಸರ್ಕಾರವೇ ಬೀಳುತ್ತಿತ್ತು: ಚಲುವರಾಯಸ್ವಾಮಿ

08:25 PM Jul 08, 2021 | Team Udayavani |

ಚಾಮರಾಜನಗರ: ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತ ಸಾಧಾರಣ ವಿಷಯ ಅಲ್ಲ. ಇದೇ ಪ್ರಕರಣ ಮಂಡ್ಯ, ಬೆಳಗಾವಿ ಜಿಲ್ಲೆಗಳಲ್ಲಾಗಿದ್ದರೆ ಸರ್ಕಾರವೇ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಬರುತ್ತಿತ್ತು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಹೇಳಿದರು.

Advertisement

ನಗರದಲ್ಲಿ ಗುರುವಾರ, ಕಾಂಗ್ರೆಸ್ ಸಹಾಯ ಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬರ ಸಾವಿಗೇ ಸರ್ಕಾರವು ಅಲುಗಾಡಿರುವ  ಪ್ರಕರಣಗಳನ್ನು ನೋಡಿದ್ದೇವೆ. ಇಲ್ಲಿ 36 ಜನರು ಮೃತಪಟ್ಟಿದ್ದರೂ ಈ ಸರ್ಕಾರ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಿದೆ. ಜನರು ಇಂಥ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಸತ್ಯ. ಯಾವುದು ಅಕ್ರಮ, ಸಕ್ರಮ, ಕೆಆರ್‌ಎಸ್‌ಗೆ ಹಾನಿ ವಿಚಾರ ಹಲವು  ವರ್ಷಗಳಿಂದ ಪ್ರಸ್ತಾಪವಾಗುತ್ತಿದೆ. ಇಂತಹ ವಿಚಾರದಲ್ಲಿ ಸರ್ಕಾರ ಉದಾಸೀನ ಮಾಡಬಾರದು. ಗಣಿಗಾರಿಕೆಯಿಂದ ಕೆಆರ್‌ಎಸ್ ಡ್ಯಾಂ ಗೆ ಆಗುವ ಹಾನಿಯ ಬಗ್ಗೆ ಅಧ್ಯಯನ ನಡೆಸಿ, ನಿರ್ದಿಷ್ಟ ಪ್ರದೇಶದಲ್ಲಿರುವ ಕ್ರಷರ್ ಕಲ್ಲಿನ ಗಣಿಗಳನ್ನು ಶಾಶ್ವತವಾಗಿ ಮುಚ್ಚಬೇಕು. ಜಿಲ್ಲೆ ಹಾಗೂ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಈ ವಿಷಯದಲ್ಲಿ ಸಂಸದೆ ಸುಮಲತಾ ಹಾಗೂ ಜೆಡಿಎಸ್ ನಾಯಕರು ಬೀದಿ ಜಗಳ ಮಾಡುವುದು ಗೌರವ ತರುವಂತಹದ್ದಲ್ಲ. ಜಿಲ್ಲೆಯಲ್ಲಿ ಹಲವು ಗಂಭೀರ ವಿಷಯಗಳಿವೆ. ಇಂತಹ ವಿಚಾರಗಳ ಬಗ್ಗೆ ಜನಪ್ರತಿನಿಧಿಗಳು ಚರ್ಚಿಸಬೇಕು. ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಕುಮಾರಸ್ವಾಮಿಯವರಿಗೆ ಇದೇನೂ ಹೊಸತಲ್ಲ. ಜನರ ಹಿತಾಸಕ್ತಿಗಳು ಇವರಿಗೆ ಬೇಕಾಗಿಲ್ಲ. ಜನರನ್ನು ದಾರಿ ತಪ್ಪಿಸುವುದಕ್ಕೆ ಇಂತಹದ್ದೆಲ್ಲವನ್ನು ಮಾಡುತ್ತಲೇ ಇರುತ್ತಾರೆ. ತಾತ್ಕಾಲಿಕ ರಾಜಕಾರಣ ಮಾಡಿ ಲಾಭ ಗಳಿಸುವುದು ಅವರ ಉದ್ದೇಶ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next