ಶಿರಸಿ: ರೈತರು, ಜನತೆ ಸಂಕಷ್ಟದಲ್ಲಿ ಇದ್ದಾಗ ಕೇಂದ್ರ ಸರಕಾರದ ಜಿಎಸ್ ಟಿ ದೇಶದ ಜನರಿಗೆ ನುಂಗಲಾರದ ಸ್ಥಿತಿ ಉಂಟಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.
ಸೋಮವಾರ ಅವರು ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ, ಬಡವರು ಬಳಸುವ ದಿನಸಿ ವಸ್ತುಗಳ ಮೇಲೆ ಜಿಎಸ್ ಟಿ ಬರೆ ಹಾಕಿದೆ. ಜನ ತೆಗಳುತ್ತಿದ್ದಾರೆ. ಜನ ಸಾಮಾನ್ಯರ ಮೇಲೆ ಇದು ಹೊರೆಯಾಗಿದೆ. ಹಾಲು, ಮೊಸರು, ಎಳೆನೀರು, ಮಜ್ಜಿಗೆ ಮೇಲೂ ಜಿಎಸ್ ಟಿ ಬಂದಿದೆ. ಇದರಿಂದ ಹೊರ ದೇಶದಲ್ಲಿ ಇದ್ದಂತೆ ಜನ ದಂಗೆ ಏಳುವ ಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.
ಅಡುಗೆ ಅನಿಲ, ಪೆಟ್ರೋಲ್ ಎಲ್ಲ ಬೆಲೆ ಏರಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಜನರ ಲೂಟಿ ಆಗುತ್ತಿದೆ ಎಂದರು.
ಹಿಂದಿನ ಸರಕಾರದ ಅನೇಕ ಯೋಜನೆ ಖಾಸಗೀಕರಣ ಮಾಡುತ್ತಿದ್ದಾರೆ. ಉದ್ಯೋಗ ಸೃಷ್ಟಿಗೆ ಏಟು ಬಿದ್ದಿದೆ. 50 ಕೆಜಿ ಗೊಬ್ಬರ ಪಡೆಯಲು ರೈತ ಎರಡು ಚೀಲ ಬತ್ತ ಮಾರಾಟ ಮಾಡಬೇಕಾದ ಸ್ಥಿತಿ ಬಂದಿದೆ. ಮಧ್ಯಮ ಹಾಗೂ ಕೂಲಿ ಕಾರ್ಮಿಕರಿಗೆ ಇಂದು ಸಮಸ್ಯೆ ಆಗಿದೆ. ಬಿಜೆಪಿ ಸರಕಾರ ಘೋಷಿಸಿದ ಜಿಎಸ್ ಟಿ ವಾಪಸ್ ಪಡೆಯಬೇಕು. ಇದನ್ನು ಸರಳೀಕಣರ ಮಾಡಬೇಕು. ಇಲ್ಲವಾದರೆ ಇಡೀ ರಾಷ್ಟ್ರದಲ್ಲಿ ದಂಗೆ ಆಗುತ್ತದೆ ಎಂದರು.
ಈ ವೇಳೆ ಪ್ರಮುಖರಾದ ಎಸ್.ಕೆ.ಭಾಗವತ, ಬ್ಲಾಕ್ ಅಧ್ಯಕ್ಷ ಜಗದೀಶ ಗೌಡ, ಬಸವರಾಜ್ ದೊಡ್ಮನಿ ಇತರರು ಇದ್ದರು.
ಮಂಡಕ್ಕಿ, ಮಜ್ಜಿಗೆ ಮೇಲೂ ಜಿಎಸ್ಟಿ ಹಾಕಿದ್ದಾರೆ. ಇಂಥ ಸ್ಥಿತಿ ಭಾರತದಲ್ಲಿ ಬರುತ್ತದೆ ಅಂದುಕೊಂಡಿರಲಿಲ್ಲ.
– ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ