ಹುಬ್ಬಳ್ಳಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಮುಳುಗುತ್ತಿರುವ ಹಡಗುಗಳಾಗಿದ್ದು, ಅದರಲ್ಲಿ ಪ್ರಯಾಣಿಸಿ ಪ್ರಾಣ ಕಳೆದುಕೊಳ್ಳಲು ಯಾರೂ ಬಯಸುವುದಿಲ್ಲ. ಯಾವುದೇ ಕಾರಣಕ್ಕೂ ಉಮೇಶ ಕತ್ತಿ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವೇಳೆ ಕೆಲವರಲ್ಲಿ ಅಸಮಾಧಾನ ಉಂಟಾಗಿದೆ. ಅಂತವರನ್ನು ಸಮಾಧಾನ ಪಡಿಸುವ ಕೆಲಸ ಮಾಡುತ್ತಿದ್ದೇವೆ. ಯಾರು ಸಚಿವರಾಗಬೇಕು, ಆಗಬಾರದು ಎನ್ನುವದಕ್ಕೆ ಹೆಚ್ಚು ಒತ್ತು ನೀಡಿಲ್ಲ. ರಾಜ್ಯದಲ್ಲಿ ನಾಲ್ಕು ವರ್ಷ ಒಳ್ಳೆಯ ಆಡಳಿತ ನೀಡುವುದಕ್ಕೆ ಹೆಚ್ಚು ಗಮನ ಹರಿಸಲಾಗಿದೆ. ಉಮೇಶ ಕತ್ತಿ ಪಕ್ಷ ಬಿಡುತ್ತಾರೆ ಎಂಬುದು ಸುಳ್ಳು ಸುದ್ದಿ. ಅವರು ಸೇರಿ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು.
ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದರ ಹಿಂದೆ ಹೊಸ ಪ್ರಯೋಗ ಇರಬಹುದು. ಮಹೇಶ ಕುಮಟಳ್ಳಿ, ಉಮೇಶ ಕತ್ತಿ ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನ ಮಾಡುವ ಕೆಲಸ ಪಕ್ಷದ ಹಿರಿಯರಿಂದ ನಡೆಯುತ್ತಿದೆ ಎಂದರು.
ಕಾಂಗ್ರೆಸ್-ಜೆಡಿಎಸ್ ನಾಯಕರ ಭಿನ್ನಾಭಿಪ್ರಾಯಗಳಿಂದ ಮೈತ್ರಿ ಸರ್ಕಾರ ಪತನಗೊಳ್ಳುತ್ತದೆ ಎಂದು ಈ ಹಿಂದೆಯೇ ಹೇಳಿದ್ದೆ, ಅದು ಸತ್ಯವಾಗಿದೆ. ಸಿದ್ದರಾಮಯ್ಯ ಹಾಗೂ ದೇವೇಗೌಡರ ಹೇಳಿಕೆ ಮತ್ತು ಪ್ರತಿ ಹೇಳಿಕೆಗಳು ಇದಕ್ಕೆ ಸಾಕ್ಷಿಯಾಗಿವೆ. ತಮ್ಮ ಬೇಗುದಿಯಿಂದ ಸರ್ಕಾರ ಪತನವಾಗುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ನಾಯಕರು ಸರ್ಕಾರ ಅಸ್ಥಿರಗೊಳಿಸುತ್ತಿದ್ದಾರೆ ಎಂದು ಬೊಬ್ಬೆ ಹಾಕಿದ್ದರು.
ಆದರೆ ಇದೀಗ ಎಲ್ಲವೂ ಬಹಿರಂಗಗೊಂಡಿದ್ದು, ಸೈದ್ಧಾಂತಿಕವಾಗಿ ಹೊಂದಾಣಿಕೆಯಾಗದೆ ಅಧಿಕಾರಕ್ಕಾಗಿ ಅನೈತಿಕ ಮೈತ್ರಿ ಮಾಡಿಕೊಂಡು ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದರು. ಬಿಜೆಪಿಯನ್ನು ದೂರ ಇರಿಸುವುದಕ್ಕೆ ಮೈತ್ರಿ ಎಂದು ಸಬೂಬು ನೀಡುತ್ತಿದ್ದರು ಎಂದು ಆರೋಪಿಸಿದರು.