Advertisement

ಹುಣಸೂರಲ್ಲಿ ಒಂದಾದ ಕಾಂಗ್ರೆಸ್‌-ಜೆಡಿಎಸ್‌ ನಾಯಕರು

10:05 PM Apr 08, 2019 | Lakshmi GovindaRaju |

ಹುಣಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಪರವಾಗಿ ಹುಣಸೂರಿನಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಜಂಟಿ ಸಭೆ ನಡೆಸುವ ಮೂಲಕ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು.

Advertisement

ನಗರದ ಅಕ್ಕಪಕ್ಕದಲ್ಲಿರುವ ಕಾಂಗ್ರೆಸ್‌-ಜೆಡಿಎಸ್‌ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ದೇಶದ ಹಿತದೃಷ್ಟಿಯಿಂದ ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತಿವೆ. ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಜಿದ್ದಾಜಿದ್ದಿ ಹೋರಾಟ ನಡೆದಿತ್ತು. ಬದಲಾದ ಪರಿಸ್ಥಿತಿಯಲ್ಲಿ ಒಟ್ಟಾಗಿದ್ದೇವೆ ಎಂದರು.

ಕಾಂಗ್ರೆಸ್‌ ಬೆಂಬಲದಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಇನ್ನು 4 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಹಾಗೂ ರಾಹುಲ್‌ಗಾಂಧಿ ಪ್ರಧಾನಿಯಾಗಲೆಂಬ ಆಶಯದೊಂದಿಗೆ ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿದ್ದು, ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದು ಕೋರಿದರು.

ವಿಶ್ವನಾಥ್‌ಗೆ ಶಕ್ತಿ ನೀಡಿ: ಶಾಸಕ, ಸಂಸದ, ಮಂತ್ರಿಯಾಗಿ ವಿಜಯಶಂಕರ್‌ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರು ಇಲ್ಲಿಯವರೇ ಆಗಿದ್ದು, ಇಲ್ಲಿಂದ ಅತಿ ಹೆಚ್ಚಿನ ಮತ ಕೊಡಿಸಬೇಕು. ಹಾಗಾದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಶಾಸಕ ವಿಶ್ವನಾಥರಿಗೆ ಹೆಚ್ಚು ಶಕ್ತಿ ಬರಲಿದೆ. ಇಲ್ಲಿನ ಚುನಾವಣಾ ಉಸ್ತುವಾರಿಯನ್ನು ವಿಶ್ವನಾಥ್‌ ಹಾಗೂ ಮಂಜುನಾಥ್‌ ವಹಿಸಲಿದ್ದಾರೆಂದು ಜಿಟಿಡಿ ಪ್ರಕಟಿಸಿದರು.

ತ್ರಿಮೂರ್ತಿಗಳು: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಮಾತನಾಡಿ, ದೇಶದಲ್ಲಿ ಜಾತ್ಯತೀತ ಶಕ್ತಿಗಳು, ಬಹುತ್ವವಾದಿಗಳು ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಮಹತ್ತರ ಆಶಯದ ಈ ಚುನಾವಣೆಯಲ್ಲಿ ಪರಸ್ಪರ ತ್ಯಾಗಮಾಡಿಕೊಂಡು ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ.

Advertisement

80 ಶಾಸಕರನ್ನು ಹೊಂದಿದ್ದರೂ ಕಾಂಗ್ರೆಸ್‌ ಮುಖ್ಯಮಂತ್ರಿ ಗಾದಿ ಬಿಟ್ಟುಕೊಟ್ಟಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ, ಡಾ.ಜಿ.ಪರಮೇಶ್ವರ್‌ ಉಪಮುಖ್ಯಮಂತ್ರಿ ಹಾಗೂ ಸಮನ್ವಯಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಕಾರ್ಯನಿರ್ವಹಿಸುತ್ತಿದ್ದು, ಈ ತ್ರಿಮೂರ್ತಿಗಳು ಉತ್ತಮ ರೀತಿಯಲ್ಲಿ ಸರ್ಕಾರ‌ವನ್ನು ಮುನ್ನಡೆಸುತ್ತಿದ್ದಾರೆ ಎಂದರು.

ಮೋದಿಗೆ ರೆಫೇಲ್‌ ಮುಳುಗು: 1989ರಲ್ಲಿ ಕೇವಲ 30 ಕೋಟಿ ರೂ. ಭ್ರಷ್ಟಾಚಾರದ ಆರೋಪದಡಿ ರಾಜೀವಗಾಂಧಿ ಅಧಿಕಾರ ಕಳೆದುಕೊಂಡರೆ, 2019ರಲ್ಲಿ ರೆಫೇಲ್‌ ಯುದ್ದ ವಿಮಾನ ಖರೀದಿ ವ್ಯವಹಾರದಲ್ಲಿ 35 ಸಾವಿರ ಕೋಟಿ ರೂ. ಅವ್ಯವಹಾರದ ಅಡಿಯಲ್ಲಿ ಮೋದಿ ಅಧಿಕಾರ ಕಳೆದುಕೊಳ್ಳುತ್ತಾರೆಂದು ಭವಿಷ್ಯ ನುಡಿದರು.

ಇಲ್ಲಿ ಅಭ್ಯರ್ಥಿ ವಿಜಯಶಂಕರ್‌ ನೆಪಮಾತ್ರ, ವಾಸ್ತವವಾಗಿ ಇದು ನಮ್ಮೆಲ್ಲರ ಚುನಾವಣೆ ಎಂದು ತಿಳಿದು ದುಡಿಯಿರಿ ಎಂದು ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಸಭೆಯಲ್ಲಿ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ಎಸ್ಸಿ, ಎಸ್ಟಿ ಘಟಕದ ಉಪಾಧ್ಯಕ್ಷ ಡಾ.ತಿಮ್ಮಯ್ಯ,

ಜಿಪಂ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಸಾವಿತ್ರಿ, ಸುರೇಂದ್ರ, ಕಟ್ಟನಾಯಕ, ಅಮಿತ್‌ದೇವರಹಟ್ಟಿ, ಮಾಜಿ ಸದಸ್ಯರಾದ ಫಜಲುಲ್ಲಾ, ಪರಮೇಶ್‌, ಬಿಳಿಕೆರೆ ಮಂಜುನಾಥ್‌, ತಾಪಂ ಅಧ್ಯಕ್ಷೆ ಪದ್ಮಮ್ಮ, ಮೈಮುಲ್‌ ನಿರ್ದೇಶಕ ಕುಮಾರ್‌, ಜೆಡಿಎಸ್‌ ತಾಲೂಕು ಅಧ್ಯಕ್ಷ ಮಾದೇಗೌಡ, ಕಾರ್ಯದರ್ಶಿ ಆರ್‌.ಸ್ವಾಮಿ,

ಕಾಂಗ್ರೆಸ್‌ ಅಧ್ಯಕ್ಷರಾದ ನಾರಾಯಣ್‌, ಶಿವಯ್ಯ, ಬಸವರಾಜೇಗೌಡ, ಮಾಜಿ ಅಧ್ಯಕ್ಷ ಅಸ್ವಾಳು ಕೆಂಪೇಗೌಡ, ಮುಖಂಡರಾದ ವಕೀಲರಾಮಕೃಷ್ಣ, ಹಜರತ್‌ಜಾನ್‌, ಬಿಳಿಕೆರೆರಾಜು, ಎ.ಪಿ.ಸ್ವಾಮಿ, ಹರಿಹರ ಆನಂದಸ್ವಾಮಿ, ಬಿ.ಎನ್‌.ಜಯರಾಂ, ಗಣೇಶಗೌಡ ಇತರರಿದ್ದರು.ಹಿಂದೆ ಗುದ್ದಾಡಿದ್ದೇವೆ, ಈಗ ಒಂದಾಗಿದ್ದೇವೆ
ಈ ಚುನಾವಣೆ ನಮಗೆಲ್ಲಾ ಸವಾಲಾಗಿದೆ. ಹಿಂದೆ ತಾಲೂಕಿನಲ್ಲಿ ಎದುರು ಬದುರು ಗುದ್ದಾಡಿ ಒಂದಾಗಿದ್ದೇವೆ. ಎರಡು ಮನಸ್ಸುಗಳು ಒಂದಾಗಿವೆ, ಸಿದ್ದರಾಮಯ್ಯ-ಜಿ.ಟಿ.ದೇವೇಗೌಡರ ಮನಸ್ಸುಗಳೇ ಒಂದಾದ ಮೇಲೆ, ನಾವು-ನೀವು ಒಂದಾಗುವುದರಲ್ಲಿ ತಪ್ಪೇನಿದೆ ಎಂದು ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌ ಪ್ರಶ್ನಿಸಿದರು. ನಾವೆಲ್ಲ ಮುಂದೆಯೂ ಒಟ್ಟಾಗಿ ಹೋಗೋಣ, ಉಳಿದೆಲ್ಲಿ ವಿಚಾರದಲ್ಲಿ ಮುಂದಿರುವ ಜೆಡಿಎಸ್‌-ಕಾಂಗ್ರೆಸ್‌ ಪ್ರಚಾರದಲ್ಲಿ ಹಿಂದಿದ್ದೇವೆ. ವಿಜಯಶಂಕರ್‌ ತಮ್ಮ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಅದನ್ನು ಮುಂದಿಟ್ಟು ಕೆಲಸ ಮಾಡೋಣ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next