Advertisement

ದೋಸ್ತಿ ಪತ್ರಿಕಾಗೋಷ್ಠಿಗೆ ಪರಂ ಗೈರು; ಪ್ರಮೋದ್, ಹೆಗ್ಡೆ ಹೆಸರಿದೆಯಂತೆ

10:35 AM Mar 19, 2019 | Team Udayavani |

ಬೆಂಗಳೂರು: ಸೋನಿಯಾ, ರಾಹುಲ್ ಸಂದೇಶದ ಪ್ರಕಾರ ಚುನಾವಣೆ ಎದುರಿಸುತ್ತೇವೆ. ಸ್ಥಾನ ಹಂಚಿಕೆ ಬಗ್ಗೆ ಇನ್ನು ಚರ್ಚೆ ಇಲ್ಲ. ನಮ್ಮ ಹೋರಾಟ ಇರೋದು ಬಿಜೆಪಿ ವಿರುದ್ಧ. ಲೋಕಸಭೆ ಚುನಾವಣೆಯ ಮಹಾತೀರ್ಪು ಕೊಡುವುದು ಮಹಾಜನತೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

Advertisement

ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್, ಜೆಡಿಎಸ್ ವರಿಷ್ಠರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಮಹಾಘಟಬಂಧನ್ ಬಗ್ಗೆ ಪ್ರಧಾನಿ ಮೋದಿಯವರು ಲಘುವಾಗಿ ಮಾತನಾಡಿದ್ದರು. 15 ರಾಜ್ಯಗಳಲ್ಲಿ ಅವರು ಮೈತ್ರಿ ಸರ್ಕಾರ ನಡೆಸುತ್ತಿದ್ದಾರೆ. ಮೋದಿ ಅವರಿಗೆ ಮೈತ್ರಿ ಸರ್ಕಾರದ ಅರಿವು ಇರಬೇಕು. ಪ್ರಧಾನಿ ಬಳಸುವ ಶಬ್ದ ನಮ್ಮನ್ನು ಪ್ರಚೋದನೆಗೊಳಿಸುತ್ತದೆ. ಅದಕ್ಕೆಲ್ಲಾ ನಾವು ಒಗ್ಗಟ್ಟಾಗಿ ಉತ್ತರ ನೀಡುತ್ತೇವೆ ಎಂದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಸಣ್ಣ,ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತೇವೆ. ಚುನಾವಣೆ ಬಳಿಕವೂ ಮೈತ್ರಿ ಸರ್ಕಾರ ಮುಂದುವರಿಯುತ್ತೆ. ಅದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದರು.

ಗುಟ್ಟು ಬಿಡದ ದೇವೇಗೌಡರು:

Advertisement

ಯಾವ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂಬ ಪ್ರಶ್ನೆಗೆ ಗುಟ್ಟುಬಿಟ್ಟು ಕೊಡದ ದೇವೇಗೌಡರು, ಇನ್ನೂ ಆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ನನಗೀಗ 87ವರ್ಷ ಆಗಿದೆ. ಲೋಕಸಭೆಗೆ ನನ್ನ ಅವಶ್ಯಕತೆ ಇದೆಯಾ ಎಂಬುದರ ಬಗ್ಗೆ ಆಲೋಚಿಸುತ್ತಿದ್ದೇನೆ. ಆದರೆ ಕೆಲವು ನನ್ನ ಗೆಳೆಯರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ನನ್ನ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ, ದಿನೇಶ್ ಗುಂಡೂರಾವ್ , ಕುಮಾರಸ್ವಾಮಿ ನಿರ್ಧರಿಸುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಪ್ರಮೋದ್ ಮಧ್ವರಾಜ್, ಜಯಪ್ರಕಾಶ್ ಹೆಗ್ಡೆ ಹೆಸರೂ ಇದೆ:

ಕಾಂಗ್ರೆಸ್ ಗೆ 20 ಸ್ಥಾನ, ಜೆಡಿಎಸ್ ಗೆ 8 ಸ್ಥಾನ ಎಂಬುದು ಹಂಚಿಕೆಯಾಗಿದೆ. ಮೈತ್ರಿ ಪಕ್ಷವಾಗಿ ನಾವು ಚುನಾವಣೆ ಎದುರಿಸುತ್ತೇವೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರಮೋದ್ ಮಧ್ವರಾಜ್, ಜಯಪ್ರಕಾಶ್ ಹೆಗ್ಡೆ ಅವರ ಹೆಸರೂ ಇದೆ. ಕಾಂಗ್ರೆಸ್ ನಿಂದ ಮಹಿಳೆಯೊಬ್ಬರ ಹೆಸರೂ ಇದೆ. ಈ ಬಗ್ಗೆ ಎರಡು, ಮೂರು ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಂಡು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ.

ಡಿಸಿಎಂ ಪರಮೇಶ್ವರ್ ಗೈರು:

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಡಿಕೆ ಶಿವಕುಮಾರ್ ಅವರು ಹಾಜರಿದ್ದರು. ಆದರೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಗೈರುಹಾಜರಾಗಿದ್ದರು.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ, ಅದಕ್ಕೆ ವಿಶೇಷವಾದ ಅರ್ಥ ಕಲ್ಪಿಸಬೇಕಿಲ್ಲ. ತುರ್ತು ಕಾರ್ಯಕ್ರಮದ ನಿಮಿತ್ತ ಅವರು ಭಾಗವಹಿಸಿಲ್ಲ ಎಂದು ದಿನೇಶ್ ಗುಂಡೂರಾವ್ ಸಮಜಾಯಿಷಿ ನೀಡಿದ್ದರು. ಲೋಕಸಭೆ ಚುನಾವಣೆಯ ಸ್ಥಾನ ಹಂಚಿಕೆಯಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವುದು ಪರಮೇಶ್ವರ್ ಅವರಿಗೆ ಅಸಮಧಾನ ತಂದಿದ್ದು, ಈ ನಿಟ್ಟಿನಲ್ಲಿ ದೇವೇಗೌಡರು ಹಾಗೂ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸಿ ತುಮಕೂರು ಕ್ಷೇತ್ರ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸುವುದಾದರೆ ತಮ್ಮದೇನೂ ಅಭ್ಯಂತರವಿಲ್ಲ ಎಂದು ಪರಮೇಶ್ವರ್ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next