Advertisement

ಸೋಲಿನ ಭೀತಿಯಿಂದ ಕಾಂಗ್ರೆಸ್‌-ಜೆಡಿಎಸ್‌ ಒಳಒಪ್ಪಂದ

10:55 PM Nov 22, 2019 | Lakshmi GovindaRaj |

ಬೆಂಗಳೂರು: ಉಪಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ಗೆ ಸೋಲಿನ ಭೀತಿ ಕಾಡುತ್ತಿದ್ದು, ಒಳ ಒಪ್ಪಂದ ಮಾಡಿಕೊಂಡಿರುವುದು ಕಾಣುತ್ತಿದೆ. ಜೆಡಿಎಸ್‌ ದಿನಕ್ಕೊಂದು ನಿಲುವು ಪ್ರಕಟಿಸುತ್ತಿದ್ದು, ಆ ಪಕ್ಷವನ್ನು ವಿಸರ್ಜನೆ ಮಾಡುವುದು ಒಳ್ಳೆಯದು. ಕಾಂಗ್ರೆಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕಾಂಗಿಯಾಗಿ ಪ್ರಚಾರ ನಡೆಸುತ್ತಿದ್ದಾರೆಂದು ಸಚಿವ ಆರ್‌. ಅಶೋಕ್‌ ವಾಗ್ಧಾಳಿ ನಡೆಸಿದರು.

Advertisement

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಾವು- ಮುಂಗುಸಿಯಂತೆ ಸಿದ್ದರಾಮಯ್ಯ- ಎಚ್‌.ಡಿ.ಕುಮಾರಸ್ವಾಮಿ ಜಗಳವಾಡಿಕೊಂಡರು. ಇದೀಗ ಸೋಲಿನ ಭೀತಿ ಕಾಡುತ್ತಿದೆ. ಜೆಡಿಎಸ್‌ 3 ಕ್ಷೇತ್ರಗಳತ್ತ ಹೆಚ್ಚಿನ ಗಮನ ನೀಡುವುದಾಗಿ ಹೇಳಿದರೆ, ಕಾಂಗ್ರೆಸ್‌ 12 ಕ್ಷೇತ್ರಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳುತ್ತಿದೆ. ಇದರಿಂದ ಒಳ ಒಪ್ಪಂದವಾಗಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್‌, ಜೆಡಿಎಸ್‌ ಇನ್ನೂ ಪ್ರಚಾರವನ್ನೇ ಆರಂಭಿಸಿಲ್ಲ. ಸಿದ್ದರಾಮಯ್ಯ ಅವರು ಒನ್‌ ಮ್ಯಾನ್‌ ಶೋ ಎಂಬಂತೆ ಒಬ್ಬರೇ ಹೋಗುತ್ತಿದ್ದಾರೆ. ನಮ್ಮ ಪಕ್ಷದಿಂದ ಅಬ್ಬರದ ಪ್ರಚಾರ ನಡೆದಿದ್ದು, 15 ಕ್ಷೇತ್ರಗಳಲ್ಲೂ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಸ್ಥಿತಿಯಲ್ಲಿದೆ. ಇಬ್ಬರು ಅಭ್ಯರ್ಥಿಗಳು ಸ್ಪರ್ಧಾ ಕಣದಿಂದ ಕಾಲ್ಕಿತ್ತಿದ್ದಾರೆ. ಸೋಲಿನ ಭೀತಿಯಿಂದಾಗಿ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌ ಗೂಂಡಾಗಿರಿ ಮಾಡುತ್ತಿದೆ. ಒಮ್ಮೆ ಕಾಂಗ್ರೆಸ್‌, ಮತ್ತೂಮ್ಮೆ ಬಿಜೆಪಿಗೆ ಬೆಂಬಲ ಎನ್ನುವ ಜೆಡಿಎಸ್‌ ಮಗದೊಮ್ಮೆ ತಟಸ್ಥ ಧೋರಣೆ ತಾಳುತ್ತಾ ದಿನಕ್ಕೊಂದು ನಿಲುವು ತೆಗೆದುಕೊಳ್ಳುತ್ತಿದೆ. ಜೆಡಿಎಸ್‌ ರಾಷ್ಟ್ರೀಯ ಪಕ್ಷವೋ, ಪ್ರಾದೇಶಿಕ ಪಕ್ಷವೋ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ. ಹಾಗಾಗಿ ಪಕ್ಷವನ್ನು ವಿಸರ್ಜಿಸುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದರು.

ಶಾಸಕ ತನ್ವೀರ್‌ ಸೇಠ್ ಮೇಲಿನ ಹಲ್ಲೆ ಪ್ರಕರಣಕ್ಕೆ ಕಾರಣ ಯಾರು? ಈ ಹಿಂದೆ ಸಿದ್ದರಾಮಯ್ಯ ಅವರು ಪಿಎಫ್ಐ, ಕೆಎಫ್ಡಿಐ ಸಂಘಟನೆ ವಿರುದ್ಧದ 120 ಪ್ರಕರಣಗಳನ್ನು ಹಿಂಪಡೆದಿರುವುದರಿಂದ ರಾಜಾರೋಷವಾಗಿ ಕೃತ್ಯ ಎಸಗುತ್ತಿದ್ದಾರೆ. ಇದೀಗ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಕಾರಣ ಹಿಂದಿನ ಅವರ ಸರ್ಕಾರವೇ, ಅಲ್ಲವೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿಳಿಸಿದರು. ಅನರ್ಹ ಶಾಸಕ ಮುನಿರತ್ನ, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್‌.ಆನಂದ್‌, ಸಹ ವಕ್ತಾರ ಎಸ್‌. ಪ್ರಕಾಶ್‌ ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಒಂಟಿ ಪ್ರಚಾರ: ಸಿದ್ದರಾಮಯ್ಯ ಅವರು ಒಂಟಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಎಡಗಡೆ ತಿರುಗಿದರೆ ಡಿ.ಕೆ.ಶಿವಕುಮಾರ್‌ ಭಯ. ಬಲಕ್ಕೆ ತಿರುಗಿದರೆ ಡಾ.ಜಿ.ಪರಮೇಶ್ವರ್‌ ಭಯ. ಹಿಂದೆ ಕೆ.ಎಚ್‌.ಮುನಿಯಪ್ಪ, ಎದುರಿಗೆ ಬಿ.ಕೆ. ಹರಿಪ್ರಸಾದ್‌ ಭಯ. ಹಾಗಾಗಿ ಅವರಿಗೆ ವೈರಾಗ್ಯ ಬಂದಂತಿದೆ. ಹೀಗಿರುವ ಸಿದ್ದರಾಮಯ್ಯ ಯಾರು ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಗೊತ್ತೇ ಇರುವುದಿಲ್ಲ. ಇನ್ನು ಅವರನ್ನೇ ಗುರಿಯಾಗಿಸಿಕೊಂಡು ಟೀಕೆ ಮಾಡಿ ಎಂದು ಏಕೆ ಸೂಚನೆ ನೀಡುತ್ತಾರೆ.

Advertisement

ಸಿದ್ದರಾಮಯ್ಯ ಅವರು ಮೊದಲು ಕಾಂಗ್ರೆಸ್‌ ನಾಯಕರಾದ ಸೋನಿಯಾಗಾಂಧಿ, ರಾಹುಲ್‌ ಗಾಂಧಿಯವರ ಭೇಟಿಗೆ ಅವಕಾಶ ಪಡೆಯಲಿ. ಪ್ರಧಾನಿಯವರ ವಿಚಾರದವರೆಗೆ ಹೋಗುವುದು ದೂರದ ಮಾತು ಎಂದು ಸಚಿವ ಆರ್‌.ಅಶೋಕ್‌ ವ್ಯಂಗ್ಯವಾಡಿದರು. ವಾರದ ಹಿಂದೆ ಎಚ್‌.ಡಿ.ಕುಮಾರಸ್ವಾಮಿಯವರು ಬಿಜೆಪಿ ಸರ್ಕಾರವನ್ನು ಬೀಳಿಸುವುದಿಲ್ಲ ಎಂದು ಹೇಳಿದ್ದರು. ಬಳಿಕ ಉಪಚುನಾವಣೆ ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುವುದಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾಗಿ ಅವರ ಮಾತು ಹೋಟೆಲ್‌ನ ಮೆನು ಇದ್ದಂತೆ. “ಟು ಡೇಸ್‌ ಸ್ಪೆಷಲ್‌’ನಂತೆ ದಿನಕ್ಕೊಂದು ನಿಲುವು ಇರುತ್ತದೆ ಎಂಬುದನ್ನು ಹೇಳಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ಶಿಸ್ತು ಉಲ್ಲಂಘಿಸಿದರೆ ಕ್ರಮ: ಸಂಸದ ಬಿ.ಎನ್‌. ಬಚ್ಚೇಗೌಡ ಅವರು ಪುತ್ರನ ಪರವಾಗಿ ದೂರವಾಣಿ ಕರೆ ಮಾಡಿ ಮನವಿ ಮಾಡುತ್ತಿದ್ದಾರೆಂಬ ಮಾಹಿತಿ ಇದೆ. ಇದನ್ನು ವರಿಷ್ಠರಿಗೂ ತಿಳಿಸಲಾಗಿದೆ. ಈಗಾಗಲೇ ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಶರತ್‌ ಬಚ್ಚೇಗೌಡ ಅವರನ್ನು ಉಚ್ಚಾಟಿಸಲಾಗಿದೆ. ಈ ರೀತಿಯ ವರ್ತನೆ ತೋರಿದರೆ ಯಾರು ಎಷ್ಟೇ ದೊಡ್ಡವರಿದ್ದರೂ ಪಕ್ಷ ಮುಲಾಜಿಲ್ಲದೆ ಕ್ರಮ ಜರುಗಿಸಲಿದೆ. ಬಚ್ಚೇಗೌಡರು ತಮ್ಮ ಪುತ್ರ ಶರತ್‌ ಪರವಾಗಿ ನಿಂತರೆ ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next