ಮೈಸೂರು: ಕಾಂಗ್ರೆಸ್-ಜೆಡಿಎಸ್‌ನವರು ಈ ಜನ್ಮದಲ್ಲಿ ಮತ್ತೆ ಒಂದಾಗಿ ಸರ್ಕಾರ ರಚಿಸುವುದಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಬ್ಬರೂ ಕಿತ್ತಾಡಿಕೊಂಡು ಅವರೇ ಸರ್ಕಾರ ಬೀಳಿಸಿಕೊಂಡರು. ಈಗ ಉಪ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್‌ನವರು ಒಳಒಪ್ಪಂದ ಮಾಡಿಕೊಂಡಿದ್ದಾರೆ. ಉಪ ಚುನಾವಣೆ ಮುಗಿದ ನಂತರ ಜೆಡಿಎಸ್-ಕಾಂಗ್ರೆಸ್ ಮತ್ತೆ ಮೈತ್ರಿ ಮಾಡಿಕೊಂದು ಸರ್ಕಾರ ರಚಿಸಲು ಮುಂದಾಗಿದ್ದಾರೆ. ಇದು ಕ್ಷಣಿಕ ಮಾತ್ರ. ಎಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲವೋ ಅಲ್ಲಿ ಜೆಡಿಎಸ್‌ಗೆ ಬೆಂಬಲ ಕೊಡುತ್ತಿದೆ. ಎಲ್ಲಿ ಜೆಡಿಎಸ್ ಗೆಲ್ಲಲು ಸಾಧ್ಯವಿಲ್ಲವೋ ಅಲ್ಲಿ ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತಿದೆ. ಇಬ್ಬರೂ ಯಾವುದೇ ಸಿದ್ಧಾಂತವಿಲ್ಲದೆ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
“ಆಪರೇಷನ್-2′ ಎಂಬುದು ಕೇವಲ ರಾಜಕೀಯ ದುರುದ್ದೇಶದ ಆರೋಪ. ನಾವು ಯಾವುದೇ ಆಪರೇಷನ್ ಮಾಡುತ್ತಿಲ್ಲ. ಅದರ ಅಗತ್ಯವೂ ನಮಗಿಲ್ಲ. ಆದರೆ, ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಹಲವು ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿರುವುದು ನಿಜ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಗೆ ತಿರುಗೇಟು ನೀಡಿದರು.
ಎಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕುವ ಬಗ್ಗೆ ನಾನು ಮಾತನಾಡಿದರೆ, ಶ್ರೀರಾಮುಲು ಗಡ್ಡ ಬಿಟ್ಟಿದ್ದಾರೆ, ಕಾವಿ ಧರಿಸುತ್ತಾರೆ ಎಂದು ನನ್ನ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡುತ್ತಾರೆ. ಪೇಜಾವರ ಶ್ರೀಗಳು, ಸುತ್ತೂರು ಶ್ರೀಗಳು ಕಾವಿ ಹಾಕಿಲ್ಲವೇ? ಕುಮಾರಸ್ವಾಮಿಯ ಟೀಕೆ ಕಾವಿ ಹಾಕಿದವರೆಲ್ಲರನ್ನೂ ಅವಮಾನ ಮಾಡಿದಂತಿದೆ.
– ಬಿ.ಶ್ರೀರಾಮುಲು, ಆರೋಗ್ಯ ಸಚಿವ