ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ನಾಗನಹಳ್ಳಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಗುಂಪುಗಳ ನಡುವೆ ಮಾರಾಮಾರಿ ನಡೆದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಚುನಾವಣೆಗೆ ಕೆಲವು ದಿನಗಳಷ್ಟೇ ಬಾಕಿಯಿರುವ ಹಿನ್ನೆಲೆಯಲ್ಲಿ ನಟ ದರ್ಶನ್ ಶನಿವಾರ ಸಿಎಂ ಸಿದ್ದರಾಮಯ್ಯ ಪರವಾಗಿ ಪ್ರಚಾರ ನಡೆಸಿದ್ದರು. ದರ್ಶನ್ ಗ್ರಾಮಕ್ಕೆ ಬಂದಾಗಲೇ ಜೆಡಿಎಸ್ ಕಾರ್ಯಕರ್ತರು ಪ್ರತಿರೋಧ ತೋರಿ ವಿರೋಧಿಸಿದ್ದರು.
ಇದೇ ವಿಚಾರವಾಗಿ ಶನಿವಾರ ರಾತ್ರಿ ಎರಡು ಪಕ್ಷದ ಕಾರ್ಯಕರ್ತರ ನಡುವೆ ಗಲಾಟೆ ಶುರುವಾಗಿದೆ. ಅಲ್ಲದೆ ಮಾರಾಕಾಸ್ತ್ರಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮೇಟಗಳ್ಳಿ ಠಾಣೆ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಲ್ಲದೆ ಎರಡು ಗುಂಪಿನ ಕಡೆಯವರು ನೀಡಿದ ದೂರು-ಪ್ರತಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ. ಘಟನೆಯಲ್ಲಿ ಗ್ರಾಮದ ನಿವಾಸಿಗಳಾದ ಜಯದೇವ, ವಿದ್ಯಾಶಂಕರ್, ಲೋಹಿತ್, ಅರ್ಜುನ್, ಅಭಿಷೇಕ್, ಉಮಾ ಶಂಕರ್, ಅನಿಲ್ ಕುಮಾರ್, ರಜತ್ ಗಾಯಗೊಂಡಿದ್ದಾರೆ. ಈ ಗಾಯಾಳುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಾಸಕ ಜಿಟಿಡಿಗೆ ತರಾಟೆ: ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವ ವಿಷಯ ತಿಳಿದ ಶಾಸಕ ಜಿ.ಟಿ.ದೇವೇಗೌಡ ಭಾನುವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅವರ ಕಾರನ್ನು ಅಡ್ಡಗಟ್ಟಿದ ಗ್ರಾಮದ ಮಹಿಳೆಯರು ಶಾಸಕ ಜಿ.ಟಿ. ದೇವೇಗೌಡರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ನಿಮ್ಮ ಕುಮ್ಮಕ್ಕಿನಿಂದಲೇ ನಮ್ಮ ಹುಡುಗರ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿದರು.
ಈ ವೇಳೆ ಜಿಟಿಡಿ ಕೂಡ ಚುನಾವಣೆ ವೇಳೆ ಗ್ರಾಮದಲ್ಲಿ ಗಲಾಟೆ ಸರಿಯಲ್ಲ ಎಂದು ಗ್ರಾಮಸ್ಥರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರ ನೆರವಿನಿಂದ ಗ್ರಾಮದಿಂದ ತೆರಳಿದರು. ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.