ಮುಂಡರಗಿ: ಮೇ.29ರಂದು ನಡೆಯಲಿರುವ ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇಲ್ಲದಿರುವುದರಿಂದಾಗಿ ಎರಡು ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಮುಖಾಮುಖೀಯಾಗಲಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಮೈತ್ರಿ ಇಲ್ಲದಿರುವ ಕಾರಣಕ್ಕೆ ಪುರಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳು ಎದುರಾಳಿಗಳಾಗಿ ಚುನಾವಣೆ ಎದುರಿಸಲಿವೆ. ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜೆಡಿಎಸ್ ಅಭ್ಯರ್ಥಿ ಅಡ್ಡಗಾಲು ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಜೊತೆಗೆ ಸಹಜವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ಸಾಂಪ್ರದಾಯಿಕ ಮತಗಳು ಪಡೆದುಕೊಂಡರೆ ಬಿಜೆಪಿ ಪಕ್ಷಕ್ಕೆ ಲಾಭವಾಗುವುದಂತೂ ಸತ್ಯ.
ತ್ರಿಕೋನ ಸ್ಪರ್ಧೆ: ಮೈತ್ರಿ ಸರಕಾರ ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಮುಂದುವರಿಸದೇ ಇರುವ ಕಾರಣಕ್ಕೆ ಮೇ 29ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಒಂದು ವೇಳೆ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಮೈತ್ರಿ ಮುಂದುವರಿದು ಸ್ಥಾನಗಳ ಹೊಂದಾಣಿಕೆ ಆಗಿದ್ದರೆ ಸಹಜವಾಗಿ ಕಾಂಗ್ರೆಸ್-ಬಿಜೆಪಿ ಮತ್ತು ಜೆಡಿಎಸ್-ಬಿಜೆಪಿ ಮಧ್ಯೆ ನೇರವಾದ ಸ್ಪರ್ಧೆ ಏರ್ಪಡುತ್ತಿತ್ತು.
ಮೈತ್ರಿ ಏಕಿಲ್ಲ?: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಲೋಕಸಭೆ ಚುನಾವಣೆಯಲ್ಲಿ ಸ್ಥಾನಗಳ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೆ ಸ್ಥಳೀಯ ಚುನಾವಣೆಗಳಲ್ಲಿ ಏಕೆ ಮೈತ್ರಿ ಮುಂದುವರಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆ. ರಾಜ್ಯಮಟ್ಟದಲ್ಲಿರುವ ಹೊಂದಾಣಿಕೆ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಏಕೆ ನಡೆಯಲಿಲ್ಲ. ರಾಜ್ಯಮಟ್ಟದಲ್ಲಿ ಉಭಯ ಪಕ್ಷಗಳ ನಾಯಕತ್ವವು ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಮುಂದುವರಿಸದೇ ಇರುವುದು ಸಾರ್ವಜನಿಕರಲ್ಲಿ ಹಲವು ಅನುಮಾನ- ಪ್ರಶ್ನೆಗಳನ್ನು ಹುಟ್ಟು ಹಾಕುವ ಜೊತೆಗೆ ತೀವ್ರ ಕುತೂಹಲ ಕೆರಳಿಸಿದೆ.
Advertisement
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಆಡಳಿತ ನಡೆಸುತ್ತಿದ್ದರೂ ಸ್ಥಳೀಯ ಚುನವಣೆಯಲ್ಲಿ ಮೈತ್ರಿ ಏಕೆ ಇಲ್ಲವಾಗಿದೆ ಎನ್ನುವುದು ಮತದಾರರಲ್ಲಿ ಕಾಡುತ್ತಿರುವ ಪ್ರಶ್ನೆ.
Related Articles
ನಾಮಪತ್ರ ಸಲ್ಲಿಕೆ ಇಲ್ಲ
ಗದಗ: ಜಿಲ್ಲೆಯ ಮುಂಡರಗಿ ಹಾಗೂ ನರಗುಂದ ಪುರಸಭೆ ಚುನಾವಣೆಗೆ ಸಂಬಂಧಿಸಿದಂತೆ ಮೇ 11ರಂದು ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ ಎಂದು ಜಿಲ್ಲಾಧಿಕಾರಿಗಳ ಚುನಾವಣೆ ವಿಭಾಗದ ಪ್ರಕಟಣೆ ತಿಳಿಸಿದೆ.
Advertisement