ಮೈಸೂರು: ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಈ ಸಂಬಂಧ ಸಿದ್ದರಾಮ ಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮೈಸೂರು ಪಾಲಿಕೆ ಮೇಯರ್ ಚುನಾವಣೆ ವಿಚಾರ ಪ್ರತಿಕ್ರಿಯಿಸಿದ ಅವರು, ಕೋಮುವಾದಿ ಶಕ್ತಿಯನ್ನು ಪಾಲಿಕೆಯಿಂದ ದೂರ ಇಟ್ಟು, ಜಾತ್ಯತೀತರು ಸೇರಿಕೊಂಡು ಅಧಿಕಾರ ಹಿಡಿಯುತ್ತೇವೆ. ಅದಕ್ಕಾಗಿ ಶನಿವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಗರಪಾಲಿಕೆ ಸದಸ್ಯರ ಸಭೆ ನಡೆಸಲಾಗುತ್ತಿದೆ ಎಂದರು.
ನಾವು ಹಗಲು ಹೊತ್ತಿನಲ್ಲಿ ರಾಜಕೀಯ ಮಾಡುವವರು. ರಾತ್ರಿ ರಾಜಕಾರಣ ಮಾಡುವವರು ನಗರಪಾಲಿಕೆಗೆ ಬೇಡ ಎನ್ನುತ್ತಿದ್ದಾರೆ. 24ರಂದು ಮೇಯರ್ ಯಾರಾಗುತ್ತಾರೆ ಎಂದು ಕಾದು ನೋಡಿ ಎಂದು ಹೇಳಿದ ಅವರು, ಈಗಾಗಲೇ ವರಿಷ್ಠರ ಜೊತೆ ಚರ್ಚೆ ಮಾಡಲಾಗಿದೆ. ಜೆಡಿಎಸ್‌ನವರು ಕೂಡ ವರಿಷ್ಠರ ಜೊತೆ ಚರ್ಚೆ ನಡೆಸಿದ್ದಾರೆ. ದೇವೆಗೌಡರ ಮೇಲೆ ನಮಗೆ ಅಪಾರ ಗೌರವ ಇದೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ದೇಣಿಗೆ, ದಾನ-ಧರ್ಮ ಮಾಡುವಾಗ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ನಾವು ದೇವರ ಬಗ್ಗೆ ಅಪಾರ ನಂಬಿಕೆಇಟ್ಟಿದ್ದೇವೆ. ನಾವು ಮಾಡುವ ಒಳ್ಳೆಯ ಕೆಲಸಗಳೇ ನಮ್ಮನ್ನು ಕಾಪಾಡುತ್ತವೆ ಎಂದರು.
ನೀವು ದೇಣಿಗೆ ಕೊಟ್ಟಿದ್ದೀರಾ ಎಂಬ ಪ್ರಶ್ನೆಗೆ ದೇಣಿಗೆ ಕೊಟ್ಟವರ ಮನೆಯನ್ನು ಗುರುತು ಮಾಡುವುದು ಸರಿಯಲ್ಲ. ಈ ರೀತಿಯ ಕೆಲಸವನ್ನು ಮಾಡಬಾರದು. ಲೆಕ್ಕದ ವಿಚಾರದಲ್ಲಿ ಸರಿಯಾದ ಲೆಕ್ಕ ಕೂಡಬೇಕು. ಪಿಎಂ ಕೇರ್ ಬಗ್ಗೆ ಯಾವುದೇ ಲೆಕ್ಕವಿಲ್ಲ. ಯಾವ ಉದ್ದೇಶಕ ದೇಣಿಗೆ ಸಂಗ್ರಹವಾಗಿದೆಯೋ, ಅದೇ ಉದ್ದೇಶಕ್ಕೆ ಬಳಸಬೇಕು ಎಂದರು.