Advertisement

ಮೈತ್ರಿ ಕಡಿದು ಬಿದ್ದರೆ ಸ್ಪರ್ಧೆಯ ಚಹರೆಯೇ ಬದಲು?

12:05 PM Mar 24, 2019 | Team Udayavani |

ಉಡುಪಿ: ಜೆಡಿಎಸ್‌ವರಿಷ್ಠ ಎಚ್‌.ಡಿ. ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧಿಸಿಯೇ ಸಿದ್ಧ ಎಂದು ಶಾಲು ಕೊಡವಿರುವುದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಗೊಂದಲ ತರಂಗಗಳನ್ನು ಎಬ್ಬಿಸಿದೆ.

Advertisement

ಯಾಕೆಂದರೆ, ದೊಡ್ಡ ಗೌಡರ ಈ ನಡೆಯಿಂದ ಈಗಾಗಲೇ ತುಮಕೂರಿನಲ್ಲಿ ಕಾಂಗ್ರೆಸ್‌ ಪಕ್ಷದಿಂದ ಬಂಡಾಯದ ಕೂಗೆದ್ದಿದೆ. ಒಂದುವೇಳೆ ಇದು ಕೈ ಮೀರಿದರೆ, ಮೈತ್ರಿ ಕಸರತ್ತಿಗೆ ಕುತ್ತು ಬರಬಹುದೇನೋ? ಹಾಗೇನಾದರೂ ಆದರೆ ಅದರ ಪರಿಣಾಮ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮೇಲೂ ಆಗಲಿದೆ.

ಒಂದು ವೇಳೆ ಸೀಟು ಒಪ್ಪಂದಕ್ಕೆ ಧಕ್ಕೆಯಾದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರತ್ಯೇಕವಾಗಿ ಸ್ಪರ್ಧಿಸಬೇಕಾಗುತ್ತದೆ. ಆಗ ಈ ಕ್ಷೇತ್ರದಿಂದ ಈಗಾಗಲೇ ಜೆಡಿಎಸ್‌ ಬಿ ಫಾರಂ ಪಡೆದ ಪ್ರಮೋದ್‌ ಮಧ್ವರಾಜ್‌ ಅವರ ಎದುರು ಜೆಡಿಎಸ್‌ ಟಿಕೆಟ್‌ನಿಂದ ಸ್ಪರ್ಧಿಸ ಬೇಕೋ ಅಥವಾ ಮಾತೃಪಕ್ಷದಿಂದಲೋ ಎಂಬ ಗೊಂದಲದ ಸ್ಥಿತಿ ನಿರ್ಮಾಣವಾಗಲಿದೆ.

ಪ್ರಮೋದ್‌ ಸದ್ಯಕ್ಕೆ ಸ್ಪರ್ಧೆಗಾಗಿ ಜೆಡಿಎಸ್‌ ಪ್ರಾಥಮಿಕ ಸದಸ್ಯತ್ವವನ್ನು ಪಡೆದಿದ್ದಾರೆ. ಬಿಫಾರಂ ಪಡೆದ ಬಳಿಕ ಎರಡೇ ದಿನಗಳಲ್ಲಿ ಅದನ್ನು ತಿರಸ್ಕರಿಸುವುದೂ ಮುಜುಗರವಾಗುತ್ತದೆ. ಇದರೊಂದಿಗೆ ಕಾಂಗ್ರೆಸ್‌ ಸಹ ಪ್ರಮೋದರಿಗೆ ಪ್ರಥಮ ಪ್ರಾಶಸ್ತ್ಯ ಕೊಡುತ್ತದೋ ಅಥವಾ ಬೇರೆ ಯಾರನ್ನಾದರೂ ನಿಲ್ಲಿಸುತ್ತದೋ ಎಂಬುದೂ ಮುಖ್ಯವಾಗಲಿದೆ.

ಅಕಸ್ಮಾತ್‌ ದಕ್ಷಿಣ ಕನ್ನಡದಲ್ಲಿ ಮಿಥುನ್‌ ರೈ ಅವರಿಗೆ ಅವಕಾಶ ಕೊಟ್ಟರೆ, ಇಲ್ಲಿ
ಸಮುದಾಯದ ಲೆಕ್ಕದಲ್ಲಿ ವಿನಯ ಕುಮಾರ್‌ ಸೊರಕೆಯವರಿಗೆ ಅವಕಾಶ ಕಲ್ಪಿಸುವ ಒತ್ತಡಕ್ಕೆ ಕಾಂಗ್ರೆಸ್‌ ಸಿಲುಕಲೂಬಹುದು. ಹಾಗೇನಾದರೂ ಘಟಿಸಿದರೆ ಸ್ವಲ್ಪ ಸಮಸ್ಯೆ. ಅದಾಗದೇ ದ.ಕ ದಲ್ಲಿ ವಿನಯ ಕುಮಾರ್‌ ಸೊರಕೆ ಅಥವಾ ಬಿ.ಕೆ. ಹರಿಪ್ರಸಾದರಿಗೆ ಅವಕಾಶ ಸಿಕ್ಕರೆ ಸಮಸ್ಯೆ ಇಲ್ಲ. ಆಗ ಮೈತ್ರಿ ಕಡಿದರೂ ಪ್ರಮೋದರ ಸ್ಪರ್ಧೆಗೆ ಬಹಳ ಸಮಸ್ಯೆಯಾಗದೆಂದೇ ವಿಶ್ಲೇಷಿಸಲಾಗುತ್ತಿದೆ.

Advertisement

ಕುತೂಹಲಕ್ಕೆ ಕಾರಣ
ಒಂದುವೇಳೆ ಮೈತ್ರಿ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಪ್ರಮೋದರು ಯಾವುದನ್ನು ಆಯ್ಕೆ ಮಾಡಿಕೊಂಡಿಯಾರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಜೆಡಿಎಸ್‌ನತ್ತ ವಾಲುತ್ತಾರೋ ಅಥವಾ ಕಾಂಗ್ರೆಸ್‌ನಲ್ಲೇ ಉಳಿಯುತ್ತಾರೋ ಎಂಬುದೂ ಮತ್ತೂಂದು ಕುತೂಹಲದ ಸಂಗತಿ. ಎರಡೂ ಪಕ್ಷಗಳ ಅಭ್ಯರ್ಥಿಗಳ ಸ್ಪರ್ಧೆ ಸಂದರ್ಭದಲ್ಲಿ ಮೈತ್ರಿ ಕೂಟದಷ್ಟು ಅನುಕೂಲಕರ ವಾತಾವರಣ ಇರುವುದೇ ಎಂಬ ಪ್ರಶ್ನೆಯೂ ಎದುರಾಗಿದೆ.

ಕ್ಷೇತ್ರದಲ್ಲಿ ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್‌ ಮುಖ ಬೆಲೆ ಅಷ್ಟೊrಂದಿಲ್ಲ. ಅದು ಗೆಲ್ಲಬೇಕೆಂದರೂ ಮೈತ್ರಿ ಪಕ್ಷದ ಬೆಂಬಲ ಮತ್ತು ಅಭ್ಯರ್ಥಿಯ ಮುಖಬೆಲೆ ಎರಡನ್ನೂ ಬಳಸಿ
ಕೊಳ್ಳಬೇಕು. ಇಂಥ ಹೊತ್ತಿನಲ್ಲಿ ಮೈತ್ರಿ ಕಡಿದರೆ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ನಿಲ್ಲಿಸುತ್ತದೋ ಇಲ್ಲವೋ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆಗೂ ಉತ್ತರ ಸಿಗಬೇಕಿದೆ. ಒಟ್ಟೂ ದೊಡ್ಡಗೌಡರ ನಡೆ ಹಾಗೂ ಕಾಂಗ್ರೆಸ್‌ ಪಕ್ಷದ ನಡೆ ಕ್ಷೇತ್ರದಲ್ಲಿನ ಸ್ಪರ್ಧೆಯ ಚಹರೆಯನ್ನು ನಿರ್ಧರಿಸಲಿದೆ.

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next