Advertisement

ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ಸಂಭ್ರಮ

04:01 PM May 20, 2018 | Team Udayavani |

ದಾವಣಗೆರೆ: ವಿಶ್ವಾಸ ಮತಯಾಚಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್‌.ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ಜೆಡಿಎಸ್‌-ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮ ಆಚರಿಸಿದರು.

Advertisement

ಬೆಳಗ್ಗೆ ಬಿಜೆಪಿಯವರು ಹಳೆಬಾತಿಯ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಪ್ರಾರ್ಥಿಸಿದ್ದರು. ಆದರೆ, ಸಂಜೆ 4 ಗಂಟೆ ವೇಳೆಗೆ ಯಡಿಯೂರಪ್ಪ ರಾಜಿನಾಮೆ ನೀಡುವ ನಿರ್ಧಾರ ಪ್ರಕಟಿಸುತ್ತಲೇ ಇತ್ತ ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಹರ್ಷ ಮುಗಿಲುಮುಟ್ಟಿತು.

ಎಚ್‌.ಡಿ. ಕುಮಾರಸ್ವಾಮಿ ನೂತನ ಮುಖ್ಯಮಂತ್ರಿಯಾಗಲಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಸಂಭ್ರಮ ಆಚರಿಸಿದರು. ಗಾಂಧಿ ವೃತ್ತದಲ್ಲಿ ಪಕ್ಷದ ಮುಖಂಡ ಜೆ. ಅಮಾನುಲ್ಲಾ ಖಾನ್‌, ಆನಂದ್‌ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಬಿಜೆಪಿ ಅನೈತಿಕ, ಅಸಂವಿಧಾನಿಕ ಮಾರ್ಗದಲ್ಲಿ ಸರ್ಕಾರ ರಚನೆಗೆ ಮುಂದಾಗಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ ಬ್ರೇಕ್‌ ಹಾಕಿದೆ. ಇದೀಗ ನಮ್ಮ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ
ಬರಲಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿದ್ದಾರೆ. ಬಡ, ದಲಿತರ ಪರ ಹಲವು ಯೋಜನೆ ಜಾರಿಮಾಡಲಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಗಣೇಶ್‌ ದಾಸಕರಿಯಪ್ಪ, ಮುಖಂಡರಾದ ಎಚ್‌.ಸಿ. ಗುಡ್ಡಪ್ಪ, ಬಾತಿ ಶಂಕರ್‌, ಖಾದರ್‌ ಭಾಷಾ, ಇತರರು ಸಂಭ್ರಮಾಚರಣೆಯಲ್ಲಿ ಭಾಗಿಯಾದರು. ಅತ್ತ ಯುವ ಕಾಂಗ್ರೆಸ್‌ ಕಾರ್ಯಕರ್ತರು ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಜಮಾಯಿಸಿ, ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿ ಮೋದಿ, ಯಡಿಯೂರಪ್ಪ, ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

Advertisement

ಮುಖಂಡರಾದ ಯತಿರಾಜ ಮಠದ್‌, ಮೊಹಮದ್‌ ಮುಜಾಹಿದ್‌ ಪಾಷಾ, ಶ್ರೀಕಾಂತ ಬಗರೆ, ನಿಕಿತ್‌ ಶೆಟ್ಟಿ, ಬಸವರಾಜ, ಮಲ್ಲಿಕಾರ್ಜುನ್‌, ಗೋವಿಂದ ಜಗಳೂರು, ಕರಿಬಸಪ್ಪ, ಮಧು ಪವಾರ್‌, ಶುಭಮಂಗಳ, ನಂದೀಶ ಗೌಡ, ರೋಷನ್‌, ರಾಮು, ರಮೇಶ ಈ ಸಂದರ್ಭದಲ್ಲಿದ್ದರು.
 
ವ್ಯಾಪಕ ಚರ್ಚೆ ಬಿಜೆಪಿ ಸರ್ಕಾರದ ವಿಶ್ವಾಸ ಮತಯಾಚನೆ ಇಡೀ ನಗರದಲ್ಲಿ ದಿನವಿಡೀ ಚರ್ಚೆಯಾಯಿತು. ಬೆಳಗ್ಗೆ ಯಡಿಯೂರಪ್ಪ ಹೇಗೆ ವಿಶ್ವಾಸ ಮತ ಯಾಚನೆಯಲ್ಲಿ ಯಶಸ್ವಿಯಾಗಲಿದ್ದಾರೆ ಎಂಬುದರ ಕುರಿತು ಭಾರೀ ಚರ್ಚೆ ನಡೆದವು. ತಮ್ಮ ಬುದ್ಧಿಶಕ್ತಿಗೆ ಅನುಸಾರ ತಾವೇ ಸಿದ್ಧಪಡಿಸಿ ಸೂತ್ರ ಮುಂದಿರಿಸಿಕೊಂಡು ಯಡಿಯೂರಪ್ಪ ಸರ್ಕಾರ ಈ ರೀತಿ ಅಧಿಕಾರದಲ್ಲಿ ಇರಲಿದೆ ಎಂಬ ವಾದ ಮಂಡಿಸುತ್ತಿದ್ದರು. ಸಂಜೆ 4 ಗಂಟೆ ವೇಳೆ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಡುವ ನಿರ್ಧಾರ ಪ್ರಕಟಿಸುತ್ತಲೇ ಕೆಲವರು ಕಾಂಗ್ರೆಸ್‌, ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅನೇಕರು ಆದಷ್ಟು ಬೇಗ ಈ ಸರ್ಕಾರ ಉರುಳಲಿ, ಮುಂದೆ ಬಿಜೆಪಿಗೆ ಬಹುಮತ ಬಂದೇ ಬರುತ್ತದೆ. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next