ಬೆಂಗಳೂರು:ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಪಿಸುಮಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಅಶೋಕ್ ಪಟ್ಟಣಗೆ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ.
ಪಿಸುಮಾತು ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಅಸಮಾಧಾನ ಹೊರಹಾಕಿದ್ದ ಅಶೋಕ್ ಪಟ್ಟಣ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶಿಸ್ತು ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್ ಅವರು ನೋಟಿಸ್ ಜಾರಿ ಮಾಡಿ ಏಳು ದಿನಗಳಲ್ಲಿ ಸಮಜಾಯಿಷಿ ನೀಡುವಂತೆ ಸೂಚನೆ ನೀಡಿದ್ದಾರೆ.
ಪಕ್ಷದ ನಾಯಕರು, ಅನುಭವಿ ಶಾಸಕರೂ ಆಗಿ ಕೆಲಸ ಮಾಡಿರುವ ನೀವು ಖಾಸಗಿಯಾಗಿ ಮಾತನಾಡುವಾಗ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಘನತೆ-ಗೌರವಗಳಿಗೆ ಕುಂದುಂಟಾಗುವಂತೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಪಾರ ಹಾನಿ ಉಂಟಾಗುವಂತಹ ವಿಚಾರಗಳನ್ನು ಮಾತನಾಡಿರುವುದು ದೃಶ್ಯ ಮಾಧ್ಯಮಗಳಲ್ಲಿ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ. ಈ ಸಂದರ್ಭದಲ್ಲಿ ಮಾತಾಡಿಕೊಂಡಿರುವ ವಿಚಾರಗಳು ಆಧಾರ ರಹಿತವಾಗಿದ್ದು ಕಾಂಗ್ರೆಸ್ ಪಕ್ಷವು ಇದನ್ನು ಸಂಪೂರ್ಣವಾಗಿ ಖಂಡಿಸುತ್ತದೆ ಮತ್ತು ನಿರಾಕರಿಸುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ನಿಮ್ಮ ಈ ವರ್ತನೆಯಿಂದ ಪಕ್ಷದ ಘನತೆ ಗೌರವಗಳಿಗೆ ಕುಂದುಂಟಾಗಿರುವುದಲ್ಲದೆ ಪಕ್ಷ ವಿರೋಧಿ ಚಟುವಟಿಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ತಾವು ತಮ್ಮ ಮೇಲಿನ ನಡವಳಿಕೆ ಬಗ್ಗೆ ಕೂಡಲೇ ಸಮಜಾಯಿಸಿ ನೀಡಲು ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ಏನಾಗಿತ್ತು?
ಇತ್ತೀಚೆಗೆ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭದಲ್ಲಿ ಹಿಂದೆ ಕುಳಿತಿದ್ದ ಅಶೋಕ್ ಪಟ್ಟಣ ಅವರು ಪುಲಕೇಶಿನಗರ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್‌ರಾಜ್ ಅಡ್ಡಿಯುಂಟು ಮಾಡುತ್ತಿರುವುದು, ಡಿ.ಕೆ.ಶಿವಕುಮಾರ್ ಎಲ್ಲರೂ ತಮ್ಮ ಕಂಟ್ರೋಲ್‌ನಲ್ಲೇ ಇರಬೇಕು ಎಂದು ಬಯಸುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂಬರ್ಥಧ ಮಾತು ಆಡಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಧಕ್ಕೆಯಾಗುವ ಕೆಲಸ ನಾನು ಮಾಡಿಲ್ಲ, ನೋಟಿಸ್ ಕೊಡುವ ಮುನ್ನ ನನ್ನ ಹೇಳಿಕೆ ಪಡೆಯಬಹುದಿತ್ತು. ಪುಲಕೇಶಿನಗರ ಟಿಕೆಟ್ ವಿಚಾರ ಅಲ್ಲಿನ ಸಮಸ್ಯೆ ನನಗೆ ಸಂಬಂಧಿಸಿದ್ದಲ್ಲ.
-ಅಶೋಕ್ ಪಟ್ಟಣ
ಅಶೋಕ್ ಪಟ್ಟಣ ಅವರಿಗೆ ಶಿಸ್ತು ಸಮಿತಿಯಿಂದ ನೋಟೀಸ್ ನೀಡಲಾಗಿದೆ. ಅದಕ್ಕೆ ಒಂದು ಪ್ರತ್ಯೇಕ ಸಮಿತಿ ಇದೆ. ಆ ಸಮಿತಿ ಎಲ್ಲವನ್ನೂ ನೋಡಿಕೊಳ್ಳಲಿದೆ.
-ಡಿ.ಕೆ.ಶಿವಕುಮಾರ್