ಬೀದರ್ : ಕಾಂಗ್ರೆಸ್ಸಿನವರು ಅಸಮರ್ಥ ನಾಯಕರಾಗಿದ್ದು, ಅವರಿಂದ ರಾಜ್ಯದ ಅಭಿವೃದ್ಧಿ ಮಾಡುವುದು ಅಸಾಧ್ಯ ಎಂಬುದು ಜನರ ಅರಿವಿಗೆ ಬಂದಿದೆ. ಹಾಗಾಗಿ ರಾಜ್ಯದಲ್ಲಿ ಇನ್ನೂ 10-15 ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭವಿಷ್ಯ ನುಡಿದರು.
ಉಪ ಚುನಾವಣೆ ಪ್ರಚಾರ ಹಿನ್ನೆಲೆ ಬಸವಕಲ್ಯಾಣಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಕಾಂಗ್ರೆಸ್ಸಿಗರಲ್ಲಿ ಪರಸ್ಪರ ಕಿತ್ತಾಟ ಶುರುವಾಗಿದೆ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಮಾತ್ರ ವಿಕಾಸ ಆಗಲಿದೆ ಎಂದು ಜನರಲ್ಲಿ ವಿಶ್ವಾಸ ಮೂಡಿದೆ. ಹಾಗಾಗಿ ಕಾಂಗ್ರೆಸ್ ಅಧಿಕಾರದಿಂದ ದೂರ ಉಳಿಯಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರದಿಂದ ಕೇವಲ ಒಂದು ವರ್ಗದ ತುಷ್ಠೀಕರಣ ನಡೆಯುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಜಾತಿ, ಮತ ಎನ್ನದೇ ಎಲ್ಲ ವರ್ಗದವ ಸರ್ವಾಂಗೀಣ ವಿಕಾಸಕ್ಕಾಗಿ ಯೋಜನೆಗಳನ್ನು ರೂಪಿಸಿದೆ. ವಿಶೇಷವಾಗಿ ರೈತರು, ಮಹಿಳೆಯರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎಂದ ಅವರು, ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ ರೂ. ಹಣ ಮೀಸಲಿಟ್ಟಿರುವುದು ತಮಗೆ ಖುಷಿ ತಂದಿದೆ. ಮರಾಠಾ ಸಮಾಜದ ಪ್ರಗತಿಗಾಗಿ ಪ್ರಾಧಿಕಾರ ರಚಿಸಲಾಗಿದೆ ಎಂದು ತಿಳಿಸಿದರು,
ರಾಜ್ಯ ಮಾತ್ರವಲ್ಲ ದೇಶದಲ್ಲೇ ಕಾಂಗ್ರೆಸ್ ಈಗ ವಿನಾಶದ ಅಂಚಿಗೆ ತಲುಪಿದೆ. ರಾಹುಲ್ ಗಾಂಧಿಯಾಗಲಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ ಅವರಲ್ಲಿ ತಿಳುವಳಿಕೆಯ ಕೊರತೆ ಇದೆ. ದೇಶ-ಸಮಾಜವನ್ನು ಹೇಗೆ ಮುನ್ನಡೆಸಬೇಕೆಂಬ ಪ್ಲ್ಯಾನ್ ಇಲ್ಲ. ಹಾಗಾಗಿ ಲಾಕ್‌ಡೌನ್ ಮತ್ತು ಕೋವಿಡ್-19 ಲಸಿಕೆ ವಿಷಯದಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಪಕ್ಷ ದೊಡ್ಡ ಪರಿವಾರ ಇದ್ದಂತೆ. ನಮ್ಮಲ್ಲಿ ಪರಸ್ಪರ ಮತ ಬೇಧಗಳು ಇರಬಹುದು. ಆದರೆ, ಮನ ಬೇಧ ಇಲ್ಲ ಎಂದ ಅರುಣಸಿಂಗ್, ಬಸವಕಲ್ಯಾಣ ಕ್ಷೇತ್ರದ ಎಲ್ಲ ಬೂತ್‌ಗಳಲ್ಲಿ ಬಿಜೆಪಿಗೆ ಲೀಡ್ ಸಿಗಲಿದೆ. ಮಾಜಿ ಶಾಸಕರಾದ ಎಂ.ಜಿ ಮುಳೆ ಮತ್ತು ಪ್ರಕಾಶ ಖಂಡ್ರೆ ಅವರು ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ಹೇಳಿದರು.