Advertisement

ಕಾಂಗ್ರೆಸ್ ತುಷ್ಟೀಕರಣದ ಪಕ್ಷ ಬಿಜೆಪಿ ವಿಕಾಸದ ಪಕ್ಷ : ಅಸ್ಸಾಂ ಸಿಎಂ ಹಿಮಂತ್ ಶರ್ಮ

06:56 PM May 09, 2023 | Team Udayavani |

ಶಿರ್ವ : ಈ ಬಾರಿಯ ಚುನಾವಣಾ ಪ್ರಣಾಳಿಕೆ ಸಹಿತ ಇಲ್ಲಿಯವರೆಗೆ ಮಾಡಿಕೊಂಡು ಬಂದ ಕಾನೂನು ಮತ್ತು ಯೋಜನೆಗಳು ಕಾಂಗ್ರೆಸ್ ಪಕ್ಷದ ತುಷ್ಠೀಕರಣ ನೀತಿಯ ರಾಜಕಾರಣದ ಮೂಲಕ ದೇಶವನ್ನು ಕೆಟ್ಟ ಪರಿಸ್ಥಿತಿಗೆ ಕೊಂಡೊಯ್ದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಅಭಿವೃದ್ದಿ, ಜನಪರ ಯೋಜನೆಗಳ ಮೂಲಕ ನವ ಭಾರತ ಜಾಗತಿಕ ಮಟ್ಟದಲ್ಲಿ ಪ್ರಕಾಶಿಸುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾಸ್ ಶರ್ಮ ಹೇಳಿದರು.

Advertisement

ಬಿಜೆಪಿ‌ ವತಿಯಿಂದ ಸೋಮವಾರ ಕಾಪು ಕ್ಷೇತ್ರ ಶಿರ್ವ ಪೇಟೆಯಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ ಸಮಾನ ನಾಗರಿಕ ಕಾಯ್ದೆ ಜಾರಿಗೆ ಬಿಜೆಪಿ ಬದ್ಧವಾಗಿದೆ. ಕರ್ನಾಟಕ ಬಿಜೆಪಿ ಪ್ರಣಾಳಿಕೆಯಲ್ಲಿ ಈ ಘೋಷಣೆ ಮಾಡಿರುವುದು ದಿಟ್ಟ ನಿರ್ಧಾರವಾಗಿದೆ.ಬಿಜೆಪಿ ಜಾತಿ ಧರ್ಮ ನೋಡಿ ರಾಜಕೀಯ ಮಾಡುವುದಿಲ್ಲ‌. ಬಿಜೆಪಿ ದೇಶ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಜನಪರ ಆಡಳಿತ ನೀಡಿದೆ ಎಂದರು.

ಮನಸ್ಸಾದರೆ ಒಂದು ಎರಡು ಮೂರು ಮದುವೆಯಾಗುತ್ತಾರೆ  ಇದು ಹೇಗೆ ಸಾಧ್ಯ ? ಒಬ್ಬರು ಒಬ್ಬರನ್ನೇ ಮದುವೆಯಾಗಬೇಕು ಇದು ಬಿಜೆಪಿಯ ಧೋರಣೆ. ಹತ್ತಾರು ಮದುವೆ ಆಗುತ್ತೆವೇ ಎನ್ನುವವರ ಅಂಗಡಿ ಬಂದ್ ಮಾಡುತ್ತೇವೆ ಎಂದು ಗುಡುಗಿದರು.

ಅಂಬೇಡ್ಕರ್ ಧರ್ಮಗಳ ಮೀಸಲಾತಿ ವಿರೋಧಿಯಾಗಿದ್ದರು. ಮುಸಲ್ಮಾನರಿಗೆ ಕಾಂಗ್ರೆಸ್ ಪಕ್ಷ ನಾಲ್ಕು ಶೇಕಡಾ ಮೀಸಲಾತಿ ನೀಡಿತ್ತು. ಮುಸಲ್ಮಾನ ಮೀಸಲಾತಿ ರದ್ದುಗೊಳಿಸಿದ್ದು ಬೊಮ್ಮಾಯಿ ಸರಕಾರದ ದಿಟ್ಟ ನಿರ್ಧಾರವಾಗಿದೆ.

Advertisement

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ಜಾರಿಗೊಳಿಸುವ ನಿರ್ಧಾರ ಘೋಷಿಸಿದೆ. ದೇಶ ವಿರೋಧಿ ಪಿಎಫ್ ಐ ಬ್ಯಾನ್ ಮಾಡಿದ್ದು ಬಿಜೆಪಿ ಸರಕಾರ. ಇದರಿಂದ ದಿಕ್ಕೆಟ್ಟ ಕಾಂಗ್ರೆಸ್‌ ಪಕ್ಷವು ಬಜರಂಗದಳ ಬ್ಯಾನ್ ಮಾಡುವುದಾಗಿ ಹೇಳಿದೆ. ಭಜರಂಗದಳ ಎಂದೂ ದೇಶ ದ್ರೋಹದ ಕೆಲಸದಲ್ಲಿ ತೊಡಗಿಲ್ಲ. ಬಜರಂಗದಳವನ್ನು ಸಿಮಿ, ಮುಜಾಹಿದ್ದೀನ್, ಐಸಿಸ್ ಗೆ ಹೋಲಿಕೆ ಮಾಡ್ತೀರಾ? ಎಂದು ಪ್ರಶ್ನಿಸಿದರು.

ಹಿಂದು, ಕ್ರೈಸ್ತ ಹೆಣ್ಮಕ್ಕಳ ಕಣ್ಣೀರ ಕಥೆ ಕಾಂಗ್ರೆಸ್ ಗೆ ಬೇಕಾಗಿಲ್ಲ
ಬಿಬಿಸಿಯ ಮೋದಿ ವಿರುದ್ಧದ ಡಾಕ್ಯುಮೆಂಟರಿ ಬಿಡುಗಡೆಗೆ ಕಾಂಗ್ರೆಸ್ ನವರು ಒತ್ತಾಯಿಸುತ್ತಾರೆ. ಲವ್ ಜಿಹಾದ್ ಕರಾಳತೆ ಚಲನಚಿತ್ರ ನಿಷೇಧಿಸಿ ಎನ್ನುತ್ತಾರೆ. ಹಿಂದೂ, ಕ್ರೈಸ್ತ ಹೆಣ್ಣು ಮಕ್ಕಳ ಕಣ್ಣೀರ ಕಥೆ ಕಾಂಗ್ರೆಸ್ ಗೆ ಬೇಡವಾಗಿದೆ. ಮುಸ್ಲಿಂ ಓಲೈಕೆಯೊಂದೆ ಅವರ ಗುರಿ ಎಂದರು.

ಎನ್ ಇಪಿ ಮೂಲಕ ಭಾರತ ನೈಜ ಇತಿಹಾಸ‌
ಎನ್ ಇಪಿ ಮೂಲಕ ಬಿಜೆಪಿ ದೇಶದ ನೈಜ ಇತಿಹಾಸ ಹೇಳಲು ಹೊರಟಿದೆ. ಕಾಂಗ್ರೆಸ್ ಪಕ್ಷವು ಪಠ್ಯದಲ್ಲಿ ಬಾಬರ್, ಟಿಪ್ಪು ಸುಲ್ತಾನ್, ಔರಂಗಜೇಬರ ಕಥೆ ಹೇಳಿಕೊಂಡು ಕುಳಿತಿತ್ತು. ಬಸವೇಶ್ವರ, ಅಬ್ಬಕ್ಕ, ಚೆನ್ನಮ್ಮ, ಕೆಂಪೇಗೌಡರ ಜೀವನವನ್ನು ಪಠ್ಯ ಮಾಡಲು ಬಿಜೆಪಿ ಹೊರಟಿದೆ ಎಂದರು.

ಕಾಂಗ್ರೆಸ್ ತುಷ್ಟಿಕರಣ ಪ್ರಣಾಳಿಕೆ
ಕಾಂಗ್ರೆಸ್ ಬಿಡುಗಡೆ ಮಾಡಿರುವುದು ಮುಸ್ಲಿಮ್ ತುಷ್ಟಿಕರಣದ ಪ್ರಣಾಳಿಕೆ ಎಂದು ಟೀಕಿಸಿದರು. ರಾಹುಲ್ ಗಾಂಧಿ ಬಗ್ಗೆ ಸೋನಿಯಾ ಗಾಂಧಿಗೆ ಗ್ಯಾರಂಟಿ ಇಲ್ಲ. ಕರ್ನಾಟಕ ಐಟಿ  ಬಿಟಿ, ಕೃಷಿ ಮತ್ತು ಉದ್ದಿಮೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಸುಳ್ಳು ಗ್ಯಾರಂಟಿಗಳಿಗೆ ಕರ್ನಾಟಕದ ಜನ ಬೆಲೆ ಕೊಡಲ್ಲ ಎಂದು‌ ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ಗುಡುಗಿದರು.

ಉಡುಪಿ ಶಾಸಕ ಕೆ‌. ರಘುಪತಿ ಭಟ್ ಮಾತನಾಡಿ, ಕಾಪುವಿನಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರ ಗೆಲುವು ಖಚಿತವಾಗಿದ್ದು ಗೆಲುವಿನ‌ ಅಂತರ ಎಷ್ಟು ಎನ್ನುವುದರ ಬಗ್ಗೆ ಲೆಕ್ಕಾಚಾರ ನಡೆಯುತ್ತಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರಾಷ್ಟ್ರ ಭಕ್ತ ಸಂಘಟನೆಯಾದ ಭಜರಂಗದಳ ನಿಷೇಧ ಘೋಷಣೆಯ ಮೂಲಕವಾಗಿ ಗೋಹತ್ಯಾಕೋರರು, ಗಲಭೆಕೋರರು, ಭಯೋತ್ಪಾದಕರು, ಜಿಹಾದಿಗಳನ್ನು ರಕ್ಷಿಸುವ ಪ್ರಯತ್ನ ನಡೆಸುತ್ತಿದೆ ಎಂದರು.

ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುವೆ ;ಗುರ್ಮೆ ಸುರೇಶ್ ಶೆಟ್ಟಿ
ಇದು ಧರ್ಮ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ ಗೆಲುವಿನ ಚುನಾವಣೆ ಎಂದು ಕ್ಷೇತ್ರದ‌ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರಕಾರವು ಜನಪರ ಆಡಳಿತ ನೀಡುವ ಮೂಲಕ ಜನರ ವಿಶ್ವಾಸಗಳಿಸಿದೆ. ಕಾಪು ಕ್ಷೇತ್ರದಲ್ಲಿ ಶಾಸಕ ಲಾಲಾಜಿ‌ ಮೆಂಡನ್ ಅವರು ಸಾವಿರಾರು ಕೋ. ರೂ. ಅನುದಾನವನ್ನು ನೀಡಿದ್ದು, ಕ್ಷೇತ್ರವು ಮಾದರಿಯಾಗಿ ಅಭಿವೃದ್ಧಿಗೊಂಡಿದೆ. ನಾನು ದುಡ್ಡು ಮಾಡುವ ದೃಷ್ಟಿಯಿಂದ ರಾಜಕಾರಣಕ್ಕೆ ಬಂದಿಲ್ಲ. ಜೀವನ ರೂಪಿಸಿಕೊಳ್ಳುವಷ್ಟು ಭಗವಂತ ನನಗೆ ಕೊಟ್ಟಿದ್ದಾನೆ. ಜನರ ಸೇವೆಗಾಗಿ ಜೀವನ ಮೂಡಿಪಾಗಿಟ್ಟೆದ್ದೇನೆ. ಮತ ನೀಡಿ ಗೆಲ್ಲಿಸಿದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿ, ಕಾಪು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸಲು ಹಗಲಿರುಳು ಕೆಲಸ ಮಾಡುತ್ತೇನೆ. ಈ ಒಂದು ಅವಕಾಶ ಪ್ರಧಾನಿ ನರೇಂದ್ರ ಮೋದಿ ಅವರ ಸದೃಢ ಭಾರತ ಸಂಕಲ್ಪ ನೆರವೇರಿಸಲು ನಾವೆಲ್ಲರೂ ಭಾಗಿಯಾಗೋಣ ಎಂದರು.

ಗುರ್ಮೆ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸೋಣ;  ಲಾಲಾಜಿ
ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಈಗಾಗಲೇ ಗುರ್ಮೆ ಸುರೇಶ್ ಶೆಟ್ಟಿ ಅವರು ಹಲವಾರು ವರ್ಷಗಳಿಂದ ಪ್ರಾಮಾಣಿಕ ಜನ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಪಕ್ಷವು ಅವರನ್ನು ಗುರುತಿಸಿ ಟಿಕೆಟ್ ನೀಡಿದ್ದು, ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು. ಅವರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಹಲವು ದೂರದೃಷ್ಟಿ ಯೋಜನೆಗಳನ್ನು ಹೊಂದಿದ್ದಾರೆ. ಈ ಅಭಿವೃದ್ಧಿ ಕೆಲಸಗಳು‌ ನಿರಂತರವಾಗಿರಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಬೇಕು ಎಂದು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು.

ಚುನಾವಣಾ ಉಸ್ತುವಾರಿ ವಿಜೇಂದ್ರ ಗುಪ್ತಾ, ಕ್ಷೇತ್ರ ಉಸ್ತುವಾರಿ ಸುಲೋಚನಾ ಭಟ್, ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಪ್ರಮುಖರಾದ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಿಲ್ಪಾ ಜಿ. ಸುವರ್ಣ, ರವೀಂದ್ರ ಪಾಟ್ಕರ್, ರಾಜೇಶ್ ನಾಯ್ಕ್, ಅನಿಲ್ ಶೆಟ್ಟಿ ಮಾಂಬೆಟ್ಟು, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

ಕಾಪು ಕ್ಷೇತ್ರ ಬಿಜೆಪಿ‌ ಅಧ್ಯಕ್ಷ ಶ್ರೀಕಾಂತ್ ನಾಯಕ್ ಸ್ವಾಗತಿಸಿ, ಗೋಪಾಲಕೃಷ್ಣ ರಾವ್ ನಿರೂಪಿಸಿದರು. ಪ್ರಚಾರ ಸಭೆಗೂ ಮುನ್ನ ಶಿರ್ವ ಪೇಟೆಯಲ್ಲಿ ರೋಡ್ ಶೋ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಬಿಗು ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next