ಬೆಂಗಳೂರು: ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನದ ಕುರಿತು ನೀಡಿದ ಹೇಳಿಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಸ ಸಮರಕ್ಕೆ ಕಾರಣವಾಗಿದೆ.
ಅನಂತಕುಮಾರ ಹೆಗಡೆ ಅವರು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ, ಸಂವಿಧಾನವನ್ನು ತಿದ್ದುಪಡಿ ಮಾಡಲು, ಕಾಂಗ್ರೆಸ್ ಮಾಡಿದ ವಿರೂಪಗಳು ಮತ್ತು ಅನಗತ್ಯ ಸೇರ್ಪಡೆಗಳನ್ನು ಸರಿಪಡಿಸಲು ಬಿಜೆಪಿಗೆ ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ” ಎಂದಿದ್ದರು.
ಕಾಂಗ್ರೆಸ್ ನಾಯಕರು ಹೇಳಿಕೆ ಕುರಿತು ವ್ಯಾಪಕ ಆಕ್ರೋಶ ಹೊರ ಹಾಕಿದ್ದು, ಬಿಜೆಪಿ ಮತ್ತು ಆರ್ ಎಸ್ ಎಸ್ ಅಂಬೇಡ್ಕರ್ ಅವರ ಸಂವಿಧಾನ ವಿರೋಧಿ ನಿಲುವು ಹೊಂದಿದೆ ಎಂದು ಕಿಡಿ ಕಾರಿ ಬಿಜೆಪಿ ಹಟಾವೋ ಸಂವಿಧಾನ ಬಚಾವೋ ಎಂಬ ಹ್ಯಾಷ್ ಟ್ಯಾಗ್ ಆರಂಭಿಸಿವೆ.
ಕಾಂಗ್ರೆಸ್ ಗೆ ತಿರುಗೇಟು ನೀಡಿರುವ ಬಿಜೆಪಿ ’42ನೇ ತಿದ್ದುಪಡಿ ಮೂಲಕ ಸಂವಿಧಾನದ ಸಾರ್ವಭೌಮತ್ವಕ್ಕೆ ಧಕ್ಕೆ ತಂದು, ಅದರ ಮೂಲ ಸ್ವರೂಪವನ್ನು ತಿರುಚಿದ ಏಕೈಕ ಸಂವಿಧಾನ ವಿರೋಧಿ ರಾಜಕೀಯ ಪಕ್ಷವೆಂದರೆ ಅದು ಕಾಂಗ್ರೆಸ್.ಸಂವಿಧಾನಕ್ಕೆ ಕಾಂಗ್ರೆಸ್ ಮಾಡಿದ್ದ ಈ ಅಪಚಾರವನ್ನು 44ನೇ ತಿದ್ದುಪಡಿ ಮೂಲಕ ಸಂವಿಧಾನದ ಮೂಲ ಆಶಯಗಳನ್ನು ಸ್ಥಿರೀಕರಣಗೊಳಿಸಿದ್ದು ಬಿಜೆಪಿ ಎಂಬುದನ್ನು ಇತಿಹಾಸವೇ ಸಾರಿ ಹೇಳುತ್ತದೆ.ಪ್ರಧಾನಮಂತ್ರಿನರೇಂದ್ರ ಅವರು, ಸಂವಿಧಾನದ ಪ್ರತಿಗೆ ನಮಸ್ಕರಿಸಿದ್ದು, ಸಂವಿಧಾನ ದಿನಾಚರಣೆಯನ್ನು ಜಾರಿಗೆ ತಂದಿದ್ದು, ಸಂವಿಧಾನದ ಬಗ್ಗೆ ಬಿಜೆಪಿಗಿರುವ ಗೌರವ ಮತ್ತು ಭಕ್ತಿಯ ಪ್ರತೀಕವಾಗಿದೆ.ಸಂವಿಧಾನವನ್ನು ಸುಟ್ಟ ಪೆರಿಯಾರ್‌ರನ್ನು ಪೂಜಿಸುವ ಕಾಂಗ್ರೆಸ್‌ಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ” ಎಂದು ಎಕ್ಸ್ ನಲ್ಲಿ ಬಿಜೆಪಿ ಪ್ರತಿಕ್ರಿಯಿಸಿದೆ.
ಇನ್ನೊಂದೆಡೆ ವಿಪಕ್ಷ ನಾಯಕ ಆರ್. ಅಶೋಕ್ ”ಭಾರತದ ಸಂವಿಧಾನದ ಬಗ್ಗೆ ಸಂಸದ ಅನಂತ್ ಕುಮಾರ್ ಹೆಗಡೆ ಅವರು ನೀಡಿರುವ ಹೇಳಿಕೆಗೂ ಭಾರತೀಯ ಜನತಾ ಪಕ್ಷದ ಅಧಿಕೃತ ನಿಲುವಿಗೂ ಯಾವುದೇ ಸಂಬಂಧವಿಲ್ಲ.ಭಾರತೀಯ ಜನತಾ ಪಕ್ಷಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂವಿಧಾನ ಎಂದರೆ ಕೇವಲ ಒಂದು ಗ್ರಂಥವಲ್ಲ. ಸಂವಿಧಾನ ಅಂದರೆ ನಮ್ಮ ದೇಶದ ಸ್ವಾತಂತ್ಯಕ್ಕಾಗಿ ಹೋರಾಡಿದ, ಬಲಿದಾನಗೈದ ಅಸಂಖ್ಯಾತ ಮಹನೀಯರ ತ್ಯಾಗದ ದ್ಯೋತಕ, ಆಶಯಗಳ ಪ್ರತೀಕ. ಸಂವಿಧಾನಕ್ಕೆ ಅಪಚಾರ ಮಾಡುವ ಅಥವಾ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕೆಲಸವನ್ನ ಬಿಜೆಪಿ ಈ ಹಿಂದೆಯೂ ಮಾಡಿಲ್ಲ, ಮುಂದೆಂದಿಗೂ ಮಾಡುವುದೂ ಇಲ್ಲ. ಅಷ್ಟೇ ಅಲ್ಲ ಅಂತಹ ಮಾತು ಆಡುವುದನ್ನು ಸಹಿಸುವುದೂ ಇಲ್ಲ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.