ಎಚ್.ಡಿ.ಕೋಟೆ: ನಾನು ಕೋಟೆಗೆ ಬಂದು ಸಭೆ ನಡೆಸಿದ ಎಲ್ಲ ಸಂದರ್ಭದಲ್ಲೂ ಕೆಲವರು ಉದ್ದೇಶ ಪೂರ್ವಕವಾಗಿ ಬೇಕಂತಲೇ ಗಲಾಟೆ ಮಾಡುತ್ತಿದ್ದು, ಎಲ್ಲಾ ಸಭೆಗಳಲ್ಲೂ ಪುನರಾವರ್ತನೆ ಅಗುತ್ತಿದ್ದು, ಪಕ್ಷ ಅಶಿಸ್ತನ್ನು ಎಂದು ಸಹಿಸಲ್ಲ ಅಂತವರನ್ನು ಪಕ್ಷದಿಂದಲೇ ಅಮಾನತು ಮಾಡಲಾಗುವುದು ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಖಡಕ್ ಎಚ್ಚರಿಕೆ ನೀಡಿದರು.
ಸರ್ಕಾರ 4 ವರ್ಷ ಪೂರೈಸಿರುವ ಹಿನ್ನೆಲೆ ಮುಂದಿನ ತಿಂಗಳು ಮೈಸೂರಿನಲ್ಲಿ ಜೂ.3 ರಂದು ನಡೆಯುವ ಸರ್ಕಾರದ ಸಾಧನ ಸಮಾವೇಶದ ಹಿನ್ನೆಲೆಯಲ್ಲಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ತಾಲೂಕಿನ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಪೂರ್ವ ಭಾವಿ ಸಭೆ ನಡೆಸಿದರು.
ಕಾಂಗ್ರೆಸ್ ದೇಶದಲ್ಲೇ ಅತ್ಯಂತ ಶಿಸ್ತಿನ ಪಕ್ಷವಾಗಿದ್ದು, ಯಾರೇ ಮುಖಂಡ, ಕಾರ್ಯಕರ್ತರಾಗಲಿ ಬಹಿರಂಗ ಸಭೆಗಳಲ್ಲಿ ಯಾರು ಗಲಭೆ, ಗೊಂದಲ ಮಾಡುವಂತಿಲ್ಲ ಎಂದು ಕೆಪಿಸಿಸಿ ವತಿಯಿಂದ ಹಾಗೂ ಮುಖ್ಯಮಂತ್ರಿಗಳಿಂದ ಆದೇಶವಾಗಿದೆ. ಮುಂದೆ ಇದೇ ಪ್ರವೃತ್ತಿ ಮುಂದುವರೆದರೇ ಪಕ್ಷ ಅಂದೇ ಅಂತವರ ವಿರುದ್ಧ ಶಿಸ್ತನ ಕ್ರಮ ಜರುಗಿಸಲಿದೆ ಎಂದು ತಿಳಿಸಿದರು.
ಮುಂದಿನ ತಿಂಗಳ ಜೂ.3 ರಂದು ಸರ್ಕಾರದ ವಿಭಾಗ ಮಟ್ಟದ ಸಾಧನ ಸಭೆ ಮೈಸೂರಿನಲ್ಲಿ ಬಹು ದೊಡ್ಡ ವೇದಿಕೆಯಲ್ಲಿ ನಡೆಯುತ್ತಿದ್ದು, ಫಲಾನುಭ ವಿಗಳಿಗೆ ಸವಲತ್ತು ವಿತರಣೆ ನಡೆಯಲಿದೆ. ಸರ್ಕಾರದ ಸೌಲಭ್ಯಗಳ ವಿತರಣಾ ಸಮಾವೇಶ ಕೂಡ ಹೌದು ಸಮಾವೇಶಕ್ಕೆ ಸರ್ಕಾರದ ಎಲ್ಲಾ ಸಚಿವರು ಅಗಮಿಸಲಿದ್ದಾರೆ. ಈ ಸಮಾವೇಶವನ್ನು ಐತಿಹಾಸಿಕ ಕಾರ್ಯಕ್ರಮವಾಗಿಸಲು ಮುಖ್ಯಮಂತ್ರಿಗಳು ನಿರ್ಧಾರ ಮಾಡಿದ್ದು ನಾವೆಲ್ಲಾ ಕೈ ಜೋಡಿಸಿ ದೊಡ್ಡ ಮಟ್ಟದಲ್ಲಿ ಶ್ರಮಿಸಬೇಕು ಎಂದು ಹೇಳಿದರು.
ಸಮಾವೇಶಕ್ಕೆ ಬರುವ ಫಲಾನುಭವಿಗಳು ಮತ್ತು ಕಾರ್ಯಕರ್ತರಿಗಾಗಿ ಪ್ರತಿ ತಾಲೂಕುವಾರು 50 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಬಸ್ ಬೇಕಿದ್ದರೆ ತಿಳಿಸಿ, ಜಿಪಂ, ತಾಪಂ, ಗಾಪಂನ ಎಲ್ಲಾ ಅಧ್ಯಕ್ಷರು ಸದಸ್ಯರು, ನಿಗಮಗಳ ನಿರ್ದೇಶಕರು, ಸಹಕಾರ ಸಂಸ್ಥೆಗಳ ನಿರ್ದೇಶಕರು, ಅಯಾ ಗ್ರಾ ಪಂ ಜನರನ್ನು ಕಾರ್ಯಕರ್ತರನ್ನು ಫಲಾನುಭವಿಗಳನ್ನು ಕರೆತರುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಪ್ರದೇಶ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಈಶ್ವರನಾಯಕ್, ರಾಜ್ಯ ಬೋವಿ ನಿಗಮದ ಅಧ್ಯಕ್ಷ ಜಿ.ವಿ.ಸೀತಾರಾಂ, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ನಂದಿನಿ ಚಂದ್ರಶೇಖರ್, ಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷ, ಸರಗೂರು ಬ್ಲಾಕ್ ಅಧ್ಯಕ್ಷ ಮನುಗನಹಳ್ಳಿ ಮಾದಪ್ಪ, ಮೈಸೂರು ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ನಂದೀಶ್, ಸಂತೋಷ್, ಸೋಮೇಶ್, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಪರಶಿವಮೂರ್ತಿ, ಬಾಲು, ಶಂಭುಲಿಂಗನಾಯಕ, ಮುಖಂಡರಾದ ಎಂ.ಕೆ ಕೃಷ್ಣ, ಕೃಷ್ಣೇಗೌಡ, ಹುಣಸೂರು ಕೃಷ್ಣನಾಯಕ, ತಾಪಂ ಸದಸ್ಯರಾದ ಅಂಕನಾಯಕ, ಬಾಲರಾಜು, ಸ್ಟ್ಯಾನಿ ಬಿಟ್ಟೋ ಸೇರಿದಂತೆ 200ಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು.
ನಾನು ಕೋಟೆ ತಾಲೂಕಿನಲ್ಲಿ ಸಭೆ ನಡೆಸುವಾಗ ಕೆಲವರು ಬೇಕಾಂತಲೇ ಪದೇ ಪದೆ ಗಲಾಟೆ ಮಾಡುತ್ತಿದ್ದು, ಅಂತ ಕೆಲವರ ಬಗ್ಗೆ ಈಗಾಗಲೇ ಜಿಲ್ಲಾ ಹೈಕಮಾಂಡ್ ತಿಳಿಸಲಾಗಿದೆ. ಸಂಬಂಧಪಟ್ಟ ಸಂಸದರಿಗೂ, ಉಸ್ತುವಾರಿ ಸಚಿವರಿಗೂ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಮುಂದಿನ ಸಭೆ ಗಳಲ್ಲೂ ಅವರ ವರ್ತನೆ ಮುಂದುವರೆದರೇ ಅಂದೇ ಪಕ್ಷ ಶಿಸ್ತಿನ ಕ್ರಮ ಜರುಗಿಸಿ ಪಕ್ಷದಿಂದ ಅಮಾನತು ಮಾಡಲಾಗುವುದು.
-ಡಾ.ಬಿ.ಜೆ.ವಿಜಯಕುಮಾರ್, ಅಧ್ಯಕ್ಷರು, ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ