Advertisement

ಕಾಂಗ್ರೆಸ್‌ ಭ್ರಷ್ಟಾಚಾರದ ಪಿತಾಮಹ

09:04 AM Apr 27, 2022 | Team Udayavani |

ಹುಬ್ಬಳ್ಳಿ: ಭ್ರಷ್ಟಾಚಾರ ಮುಕ್ತ ಭಾರತವೇ ಕಾಂಗ್ರೆಸ್‌ ಮುಕ್ತ ಭಾರತ ಎನ್ನುವ ಅರ್ಥವಾಗಿದೆ. ಕಾಂಗ್ರೆಸ್‌ ಭ್ರಷ್ಟಾಚಾರದ ಪಿತಾಮಹ ಎನ್ನುವುದು 20 ವರ್ಷದಲ್ಲಿ ಅಧಿಕಾರದ ಇತಿಹಾಸ ಸ್ಪಷ್ಟಪಡಿಸುತ್ತದೆ. ಕಾಂಗ್ರೆಸ್‌ ರಾಷ್ಟೀಯ ಅಧ್ಯಕ್ಷರು, ಅಳಿಯ, ರಾಜ್ಯಾಧ್ಯಕ್ಷರು ಕೆಲ ನಾಯಕರು ಜಾಮೀನು ಮೇಲೆ ಹೊರಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಲೇವಡಿ ಮಾಡಿದರು.

Advertisement

ಇಲ್ಲಿನ ಕ್ಯೂಬಿಕ್ಸ್‌ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಪಿತಾಮಹ ಭಾರತೀಯ ಕಾಂಗ್ರೆಸ್‌. ಲಾಲ್‌ ಬಹದ್ದೂರ್‌ ಶಾಸ್ತ್ರಿ ಬಿಟ್ಟರೆ ಉಳಿದವರೆಲ್ಲಾ ಭ್ರಷ್ಟ ಪ್ರಧಾನಿಗಳು. ಅರ್ಕಾವತಿ ಪ್ರಕರಣದ ಹೊರ ಬಂದರೆ ಸಿದ್ದರಾಮಯ್ಯ ಕೂಡ ಜೈಲಿನಲ್ಲಿರುತ್ತಾರೆ. ಪರ್ಸಂಟೇಜ್‌ ಜಾಸ್ತಿ ಮಾಡಿದ್ದು ಕಾಂಗ್ರೆಸ್‌ ಪಕ್ಷ. ಇದನ್ನು ಅವರ ಸ್ನೇಹಿತ ಸಿ.ಎಂ.ಇಬ್ರಾಹಿಂ ಅವರು ಬಹಿರಂಗವಾಗಿ ಹೇಳಿದ್ದಾರೆ. ಇಂತಹ ಪಕ್ಷದಿಂದ ದೇಶ, ರಾಜ್ಯಕ್ಕೆ ಯಾವುದೇ ಅವಶ್ಯಕತೆಯಿಲ್ಲ. ಅಧಿಕಾರವಿಲ್ಲದ ಕಾಂಗ್ರೆಸ್‌ ನಾಯಕರ ಚಡಪಡಿಸುತ್ತಿದ್ದು, ಇದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಎಂದರು.

ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಗೆಲ್ಲುವುದರಲ್ಲಿ ಸಂಶಯವಿಲ್ಲ. ಈ ಸಂಕಲ್ಪದ ಹಿಂದೆ ಪಕ್ಷದ ಕಾರ್ಯಕರ್ತರ ಪಡೆ ಇದೆ. ಹುಬ್ಬಳ್ಳಿ ನೆಲ ಪಕ್ಷಕ್ಕೆ ಪುಣ್ಯದ ನೆಲವಾಗಿದ್ದು, ಪಕ್ಷದ ಭದ್ರ ಕೋಟೆಯಾಗಿದೆ. ಇಲ್ಲಿ ಕಾಂಗ್ರೆಸ್‌ ಬರದಂತೆ ಕಾರ್ಯರ್ತರು ಸಂಕಲ್ಪ ತೊಟ್ಟು ಕೆಲಸ ಮಾಡಬೇಕು. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಬಿಜೆಪಿ ಸಿದ್ಧತೆ, ಯಾತ್ರೆಗಳಿಗೆ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಅವರಿಗೆ ಹೆದರಿಕೆ ಶುರುವಾಗಿದೆ ಎಂದು ಹೇಳಿದರು.

ಸಂತ ಶಿಶುನಾಳ ಷರೀಫರ ನೆಲದಲ್ಲಿ ಮತೀಯ ಗಲಭೆಗಳು ನಡೆಯತ್ತಿವೆ ಎಂದರೆ ಅದರ ಹಿಂದೆ ಕಾಂಗ್ರೆಸ್‌ ಪ್ರೇರಕ ಶಕ್ತಿಯಿದೆ. ಪಕ್ಷದ ಪ್ರಮುಖರು ಅಂದಿನ ಗಲಭೆಯಲ್ಲಿ ತೊಡಗಿದ್ದರು. ಇದರೊಂದಿಗೆ ಎಐಎಂಐಎಂ ಪಕ್ಷದ ಮುಖಂಡರು ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಅವರ ಅವಧಿಯಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದು, ಈ ಹಂತಕರ ಬಂಧನಕ್ಕೆ ರಾಜ್ಯ ಸರಕಾರ ಮುಂದಾಗಲಿಲ್ಲ. ಜೈಲಿನಲ್ಲಿಯೇ ಕೊಲೆ ನಡೆದವು. ಹಿಂದೂ ಕಾರ್ಯಕರ್ತರ ಹತ್ಯೆಗಳಿಗೆ ಕಾರಣವಾದ ಸಂಘಟನೆಗಳ ಎರಡು ಸಾವಿರಕ್ಕೂ ಹೆಚ್ಚು ಜನರ ಪ್ರಕರಣಗಳನ್ನು ಹಿಂಪಡೆದರು. ಈ ನಡೆ ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಕಾರಣವಾಯಿತು. ಅಂದೇ ಈ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಿದ್ದರೆ ಇಂದು ಮತೀಯ ಗಲಭೆಗಳು ಇರುತ್ತಿರಲಿಲ್ಲ. ಕೆಜಿ ಹಳ್ಳಿ, ಡಿಜಿ ಹಳ್ಳಿ ಮಾರಿಯಲ್ಲಿ ಇಲ್ಲಿಯೂ ಕೆಲ ದುಷ್ಟ ಶಕ್ತಿಗಳು ಗಲಭೆ ಮಾಡಲು ಮುಂದಾಗಿದ್ದವು. ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ದಲಿತ ಶಾಸಕ ಎನ್ನುವ ಕಾರಣಕ್ಕೆ ಅವರ ಬೆನ್ನಿಗೆ ನಿಲ್ಲಲಿಲ್ಲ. ಬಿಜೆಪಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿತು ಎಂದರು.

Advertisement

ರಾಜ್ಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತು ಸದಸ್ಯ ತುಳಸಿ ಮುನಿರಾಜಗೌಡ ಮಾತನಾಡಿ, ರಾಜ್ಯಾಧ್ಯಕ್ಷರು ವಿಶೇಷ ಕಾರ್ಯಕ್ರಮಗಳ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದ್ದಾರೆ. ಹಲವು ಯಾತ್ರೆಗಳ ಮೂಲಕ ಪಕ್ಷದ ಬಲವರ್ಧನೆ, ಮಾದರಿ ಗ್ರಾಪಂ ನಿರ್ಮಾಣಕ್ಕೆ ಅಲ್ಲಿನ ಗ್ರಾಪಂ ಸದಸ್ಯರಿಗೆ ತರಬೇತಿ ನೀಡುವ ಕೆಲಸ ಮಾಡಲಾಯಿತು. ರಾಜ್ಯಾಧ್ಯಕ್ಷರ ತಂಡ 95 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಮಾಡಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.

ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಮಾತನಾಡಿ, ಹು-ಧಾ ಮಹಾನಗರ ಜಿಲ್ಲೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಉಳಿದಿರುವ ಪೂರ್ವ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಭಾವುಟ ಹಾರಾಡಬೇಕು. ಹಿಂದೆ ಗ್ಯಾಸ್‌ಗಾಗಿ ಸಂಸದರ ಮೂಲಕ ಶಿಫಾರಸು ಪತ್ರ ಪಡೆಯುವ ಕಾಲವಿತ್ತು. ಆದರೆ ಇಂದು ಪ್ರತಿಯೊಂದು ಮನೆಗೆ ಗ್ಯಾಸ್‌ ಸಂಪರ್ಕ ಇದೆ ಎಂದು ಹೇಳಿದರು.

ವಿಧಾನ ಪರಿಷತ್ತು ಸದಸ್ಯ ಪ್ರದೀಪ ಶೆಟ್ಟರ, ಮುಖಂಡರಾದ ಲಿಂಗರಾಜ ಪಾಟೀಲ, ನಾರಾಯಣ ಜರತಾರಘರ, ಸಂಜಯ ಕಪಟಕರ, ಎಂ. ರಾಜೇಂದ್ರ, ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಸೀಮಾ ಮಸೂತಿ, ಭಾರತಿ ಮುಗದುಮ್‌, ಚಂದ್ರಶೇಖರ ಗೋಕಾಕ, ತಿಪ್ಪಣ್ಣ ಮಜ್ಜಗಿ, ವಿಜಯಾನಂದ ಶೆಟ್ಟಿ, ಪ್ರಭು ನವಲಗುಂದಮಠ, ಸಂತೋಷ ಚವಾಣ, ದತ್ತಮೂರ್ತಿ ಕುಲಕರ್ಣಿ, ಬಸವರಾಜ ಗರಗ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next