ಕುಂದಾಪುರ: ರಾಜ್ಯ ಪ್ರಣಾಳಿಕೆಯಲ್ಲಿ ಉಲ್ಲೇಖೀತ ವಿಷಯದ ಕುರಿತು ಕ್ಷೇತ್ರದ ಅಭ್ಯರ್ಥಿಯಾಗಿ ಅನಪೇಕ್ಷಿತ ಚರ್ಚೆ ಮಾಡುವುದಿಲ್ಲ. ಕಾಂಗ್ರೆಸ್ ಹಿಂದುತ್ವದ ವಿರೋಧಿಯಲ್ಲ. ನಾನೂ ಹಿಂದೂ. ನಮ್ಮ ಪಕ್ಷಕ್ಕೆ ಈಗಾಗಲೇ ಅನೇಕ ಹಿಂದೂ ಸಂಘಟನೆ ಕಾರ್ಯಕರ್ತರು ಸೇರ್ಪಡೆಯಾಗಿದ್ದಾರೆ. ನಾವು ಯಾವುದೇ ಧರ್ಮದ ವಿರೋಧಿಗಳಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಹೇಳಿದರು.
ಅವರು ಗುರುವಾರ ಇಲ್ಲಿ ಸುದ್ದಿಗೋಷ್ಟಿಯಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಅಪಾರ ಸ್ಪಂದನ ದೊರೆಯುತ್ತಿದೆ. ರಾಜ್ಯದೆಲ್ಲೆಡೆ ಕಾಂಗ್ರೆಸ್ ಪರವಾದ ಅಲೆ ಇದೆ. ಇದಕ್ಕಾಗಿ ಭಾವನಾತ್ಮಕವಾಗಿ ಮತಗಳನ್ನು ಸೆಳೆಯಲು ಬಿಜೆಪಿ ಕಸರತ್ತು ಮಾಡುತ್ತಿದೆ. ಹಿಂದುತ್ವ ಎನ್ನುವುದು ಬಿಜೆಪಿಗೆ ಚುನಾವಣೆ ಸರಕು. ಬಳಿಕ ಕಾರ್ಯಕರ್ತರ ಅಗತ್ಯ ಬಿಜೆಪಿಗೆ ಇರುವುದಿಲ್ಲ. ಅನೇಕ ಹಿಂದೂ ಸಂಘಟನೆ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದರು.
ಭರವಸೆ
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆ ಮನೆಗೆ ತಲುಪಿಸಿದ್ದೇವೆ. ಕ್ಷೇತ್ರದಲ್ಲಿ ಇರುವ ಸಮಸ್ಯೆಗಳಾದ 94 ಸಿ., 94ಸಿಸಿ, ಹಕ್ಕುಪತ್ರ ಸಮಸ್ಯೆ, ಸಿಆರ್‌ಝೆಡ್ ಸಮಸ್ಯೆ, ಎಆರ್‌ಟಿಒ ಕಚೇರಿ ಸ್ಥಾಪನೆ, ಕೋಡಿ ಭಾಗದಲ್ಲಿ ಹಕ್ಕುಪತ್ರ ಹಾಗೂ ಉಪ್ಪುನೀರಿನ ಸಮಸ್ಯೆ ನಿವಾರಣೆ, ಗಂಗೊಳ್ಳಿ ಕುಂದಾಪುರ ಸೇತುವೆ, 44 ವರ್ಷಗಳಿಂದ ಬಾಕಿ ಇರುವ ವಾರಾಹಿ ಮೂಲ ಯೋಜನೆ ಕಾರ್ಯಾನುಷ್ಠಾನ, ಹಳ್ಳಿ ಹಳ್ಳಿಗೆ ವಾರಾಹಿ ಉಪಕಾಲುವೆ, ಕುಂದಾಪುರ ಕನ್ನಡ ಅಕಾಡೆಮಿ ಸ್ಥಾಪನೆಗೆ ಯತ್ನ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಬೇಕೆಂಬ ಉದ್ದೇಶ ಇದೆ ಎಂದರು.
ಪ್ರತಾಪರ ನಾಯಕತ್ವದಲ್ಲಿ
Related Articles
ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟರ ನೇತೃತ್ವದಲ್ಲಿ, ನಾಯಕತ್ವದಲ್ಲಿ, ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಲಾಗುತ್ತಿದೆ ಎಂದರು.
ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಕುಂದರ್, ಪ್ರತಾಪರು ಕೋಟ ಹಾಗೂ ಕುಂದಾಪುರ ಬ್ಲಾಕ್‌ನಲ್ಲಿ ಸಭೆಗಳನ್ನು ನಡೆಸಿ, ಚುನಾವಣೆ ಎದುರಿಸುವ ಬಗ್ಗೆ ಸೂಕ್ತ ಸೂಚನೆಗಳನ್ನು ನೀಡಿದ್ದಾರೆ. ಚುನಾವಣೆಗಳ ಅನುಭವ ಬಳಸಿಕೊಳ್ಳುತ್ತಿದ್ದೇವೆ ಎಂದರು.
ಮುಖಂಡ ಕೃಷ್ಣದೇವ ಕಾರಂತ, ಪ್ರತಾಪರು ಪ್ರತೀ ಗ್ರಾಮದ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಜಾತಿ ರಾಜಕಾರಣ ಇಲ್ಲ. ಜಾತ್ಯತೀತ ಪಕ್ಷ. ಬಿಜೆಪಿ ಜಾತಿ ಆಧಾರದಲ್ಲಿ ಮತಯಾಚನೆ ಮಾಡುತ್ತಿದೆ ಎಂದರು.
ಹಾಲಾಡಿ ಹೆಸರಲ್ಲಿ ಓಟು
ಡಿಸಿಸಿ ವಕ್ತಾರ ವಿಕಾಸ್ ಹೆಗ್ಡೆ, ಬಿಜೆಪಿಯವರು ಅಭ್ಯರ್ಥಿಗೆ 30 ವರ್ಷದ ರಾಜಕೀಯ ಮಾಡಿ ಗೊತ್ತಿದೆ ಎನ್ನುತ್ತಾರೆ. ಆದರೆ ಹಾಲಾಡಿ ಹೆಸರಿನಲ್ಲಿ ಓಟು ಕೇಳುತ್ತಾರೆ. ಅಭ್ಯರ್ಥಿಯ ಊರಾದ ಅಮಾಸೆಬೈಲಿನಲ್ಲಿ ಆಸ್ಪತ್ರೆ ಇಲ್ಲ, 11 ಶಾಲೆಗಳ ಪೈಕಿ 3 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, ಹಿಂದೂ ರುದ್ರಭೂಮಿ ಇಲ್ಲ, ಜೂನಿಯರ್ ಕಾಲೇಜಿಲ್ಲ, ವಾರಾಹಿ ಅಲ್ಲೇ ಹರಿದರೂ ಅದರ ನೀರಿಲ್ಲ. ಊರಿನ ಸಮಸ್ಯೆಯೇ ಬಗೆಹರಿಸಲಾಗದವರು ಕ್ಷೇತ್ರಾದ್ಯಂತ ಸಮಸ್ಯೆ ನಿವಾರಿಸುವುದು ಹೌದೇ ಎಂದರು. ಕಾಂಗ್ರೆಸ್ ಅಭ್ಯರ್ಥಿಗೆ 3 ಅವಧಿಯ ಪಂಚಾಯತ್ ಸದಸ್ಯತ್ವ, 20 ವರ್ಷಗಳಿಂದ ಹಾಲಿನ ಸೊಸೈಟಿ ಆಡಳಿತದ ಅನುಭವ ಇದೆ ಎಂದರು.
ಧರ್ಮ ನಿರಪೇಕ್ಷಿ
ಮೊಳಹಳ್ಳಿ ದಿನೇಶ್ ಹೆಗ್ಡೆ ಅವರು ಹಿಂದೂ ವಿರೋಧಿಯೂ ಅಲ್ಲ. ಯಾವುದೇ ಧರ್ಮದ ವಿರೋಧಿಯೂ ಅಲ್ಲ. 20 ವರ್ಷಗಳಿಂದ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಅನೇಕ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ, ಎಲ್ಲರನ್ನೂ ಜತೆಯಾಗಿ ಕೊಂಡೊಯ್ಯುತ್ತಿದ್ದಾರೆ ಎಂದರು.
ಭ್ರಷ್ಟಾಚಾರ ವಿರೋಧ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ವಿವಿಧ ಸರಕಾರಿ ಕಚೇರಿಗಳಲ್ಲಿ ಹಬ್ಬಿದ ಭ್ರಷ್ಟಾಚಾರದ ವಿರೋಧವಾಗಿ ಈಗಾಗಲೇ ಕಾಂಗ್ರೆಸ್ ಹೋರಾಟ ಮಾಡುತ್ತಾ ಬಂದಿದೆ. ಪುರಸಭೆಯಲ್ಲೂ ಪಕ್ಷದ ಸದಸ್ಯರು ಹೋರಾಡುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಯ ಎಂದರು.
ಮುಖಂಡರಾದ ವಿನೋದ್ ಕ್ರಾಸ್ಟೊ, ಅಶೋಕ್ ಪೂಜಾರಿ ಬೀಜಾಡಿ ಉಪಸ್ಥಿತರಿದ್ದರು.