ಕಾರಟಗಿ: ದೇಶದಲ್ಲಿ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಳ್ಳುತ್ತಿದ್ದು, ಇದಕ್ಕೆ ನಿನ್ನೆ ಪ್ರಕಟವಾದ ತ್ರಿಪುರಾ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶವೇ ಸಾಕ್ಷಿಯಾಗಿದೆ. ಆದರೂ ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ನವರು ಬರೀ ಹಾನಗಲ್ಲ ಗೆಲುವನ್ನೇ ಮುಂದೆ ಮಾಡಿಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅದೇ ಸಿಂದಗಿಯಲ್ಲಿನ ಬಿಜೆಪಿಯ ಪ್ರಚಂಡ ಗೆಲುವು ಅವರಿಗೆ ಲೆಕ್ಕಕ್ಕಿಲ್ಲ. ಈಗಾಗಲೇ ರಾಜ್ಯದಲ್ಲೂ ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕಳೆದುಕೊಂಡು ಪ್ರಾದೇಶಿಕ ಪಕ್ಷ ಎಂದು ಕರೆಯುವ ಸ್ಥಿತಿಗೆ ಬಂದು ನಿಂತಿದೆ. ಕಾಂಗ್ರೆಸ್ ಈಗಾಗಲೇ ಇಡೀ ದೇಶದಲ್ಲಿ ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂದರು.
ನಿನ್ನೆ ದಿನ ಪ್ರಕಟವಾದ ತ್ರಿಪುರಾ ರಾಜ್ಯದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ 334 ಸ್ಥಾನಗಳಲ್ಲಿ ಬಿಜೆಪಿ 329 ಸ್ಥಾನಗಳನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವಿಪ್ ಮಾಡುವ ಮೂಲಕ ಪ್ರಚಂಡ ಗೆಲುವು ದಾಖಲಿಸಿದೆ. ಇನ್ನು ಅಲ್ಲಿ ಕಾಂಗ್ರೆಸ್‌ಗೆ ಸಿಕ್ಕಿದ್ದು ಒಂದೇ ಒಂದು ಸ್ಥಾನ, ಅವರಿಗೆ ನಾಚಿಕೆಯಾಗಬೇಕು. ಚಾಮುಂಡೇಶ್ವರಿಯಲ್ಲಿ ಪಲ್ಟಿ ಹೊಡೆಯುವ ಪರಿಸ್ಥಿತಿ ಎದುರಾಗಿ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿ ಬಾದಾಮಿಗೆ ಓಡಿದರು. ಈಗ ಅಲ್ಲಿ ಬಿಟ್ಟು ಜಮೀರನ ಕ್ಷೇತ್ರಕ್ಕೆ ಓಡಿ ಹೋಗೋ ಪರಿಸ್ಥಿತಿ ಬಂದಿದ್ದಾದರೂ ಏಕೆ ಎನ್ನುವುದನ್ನು ಮೊದಲು ಕಾಂಗ್ರೆಸ್ಸಿಗರು ಸ್ಪಷ್ಟಪಡಿಸಲಿ. ಬರೀ ಹಿಂದುಳಿದವರನ್ನು ಉದ್ಧಾರ ಮಾಡಿದ್ದೀವಿ, ದಲಿತರನ್ನು ಉದ್ಧಾರ ಮಾಡಿದ್ದೀವಿ ಎಂದು ಜಂಬ ಕೊಚ್ಚಿಕೊಳ್ಳುವವರಿಗೆ ಯಾವಾಗ ಬುದ್ದಿ ಬರುತ್ತೋ ಎಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನಿರಾಣಿ ಆದಷ್ಟು ಬೇಗ ಸಿ.ಎಂ. ಆಗ್ತಾರೆ ಎನ್ನುವ ತಮ್ಮ ಹೇಳಿಕೆ ಬಗ್ಗೆ ಮಾತನಾಡಿದ ಅವರು, ನಾನು ಹೇಳಿದ್ದು ಅವರು ಮುಖ್ಯಮಂತ್ರಿಯಾಗುವುದು ಈಗಲ್ಲ. ಮುಂದಿನ ದಿನಗಳಲ್ಲಿ ಆಗೇ ಆಗುತ್ತಾರೆ ಎನ್ನುವ ಅರ್ಥದಲ್ಲಿ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್‌ಗೆ ನಾವು ಬಹಿರಂಗವಾಗಿಯೇ ಬೆಂಬಲ ಕೇಳಿದ್ದೇವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಎರಡು ದಿನ ಬಿಟ್ಟು ಹೇಳುವುದಾಗಿ ಹೇಳಿದ್ದಾರೆ ಎಂದರು. ಶಾಸಕ ಬಸವರಾಜ ದಢೇಸುಗೂರು ಇನ್ನಿತರರು ಇದ್ದರು.