ಹುಬ್ಬಳ್ಳಿ: ಚುನಾವಣೆಗೂ ಮುನ್ನವೇ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಯ ಮುಸುಕಿನ ಗುದ್ದಾಟ ಶುರುವಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. 150 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ನಡುವೆ ಆಂತರಿಕ ಕಲಹ ಬಲವಾಗುತ್ತಿದೆ ಎಂದರು.
ರಾಜಸ್ಥಾನ, ಛತ್ತೀಸಗಢದಲ್ಲಿ ಚುನಾವಣಾ ವೇಳೆ ನೀಡಿದ ಭರವಸೆಗಳನ್ನೇ ಕಾಂಗ್ರೆಸ್ ಈಡೇರಿಸಿಲ್ಲ. ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದ ಹತ್ತು ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ರಾಹುಲ್ ಗಾಂಧಿ ವಾಗ್ದಾನ ಮಾಡಿದ್ದರು. ಅಲ್ಲಿ ಮತ್ತೊಂದು ಅವಧಿಗೆ ಚುನಾವಣೆ ಎದುರಾಗುತ್ತಿದ್ದರೂ ರೈತರ ಸಾಲ ಮನ್ನಾ ಆಗಿಲ್ಲ. ಕಾಂಗ್ರೆಸ್ ಎಂದರೆ ಸುಳ್ಳುಗಳ ಅರಮನೆ ಎಂಬುದಾಗಿದ್ದು, ಇದೀಗ ಕರ್ನಾಟಕದಲ್ಲಿ ಉಚಿತ ಕೊಡುಗೆಗಳ ಭರವಸೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಕಾರ್ಯಕ್ಕೆ ಮುಂದಾಗಿದೆ. ಜನ ಇದನ್ನು ನಂಬುವುದಿಲ್ಲ. ಕಾಂಗ್ರೆಸ್ ನಾಯಕರು ಸಿಎಂ ವಿರುದ್ಧ ಅವಮಾನಕರ, ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದು, ಅವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಇದನ್ನೂ ಓದಿ:ಬಿಎಸ್ ವೈ ಮಾರ್ಗದರ್ಶನ, ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ನಳಿನ್ ಕಟೀಲ್
ಬಿಜೆಪಿ ಮನೆ, ಮನೆಗೆ ನಳಗಳ ಸಂಪರ್ಕ, ಪ್ರಧಾನಿ ಆವಾಸ ಯೋಜನೆಯಡಿ ಮನೆಗಳ ನಿರ್ಮಾಣ ಇನ್ನಿತರ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದೆ. ಬೂತ್ ಮಟ್ಟದಲ್ಲಿ ವಿಜಯ ಸಂಕಲ್ಪ ಅಡಿಯಲ್ಲಿ 51,872 ಬೂತ್ ಗಳಲ್ಲಿ ಸುಮಾರು 15 ಲಕ್ಷ ಕಾರ್ಯಕರ್ತರು 32 ಲಕ್ಷ ಮನೆಗಳನ್ನು ಸಂಪರ್ಕಿಸಿದ್ದಾರೆ ಎಂದರು.
ಶುಕ್ರವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹುಬ್ಬಳ್ಳಿಗೆ ಆಗಮಿಸಲಿದ್ದು, ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಶನಿವಾರ ರೋಡ್ ಶೋ ನಡೆಸಲಿದ್ದಾರೆ ಎಂದರು.