ಜೆರೆಮಿ ಕಾರ್ಬಿನ್ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ವಿರೋಧಿ ನಿಲುವು ಹೊಂದಿದ್ದಾರೆ ಹಾಗೂ ಬ್ರಿಟನ್ ಸಂಸತ್ತಿನಲ್ಲಿ ಭಾರತದ ವಿರುದ್ಧ ಗೊತ್ತುವಳಿಯನ್ನೂ ಮಂಡಿಸಿದ್ದಾರೆ. ಅಂಥ ವ್ಯಕ್ತಿಯನ್ನು ಭೇಟಿ ಮಾಡುವ ಅಗತ್ಯವೇನಿತ್ತು.
ಕಾಂಗ್ರೆಸ್‌ನ ಸಾಗರೋತ್ತರ ವಿಭಾಗ ಬ್ರಿಟನ್‌ನ ವಿರೋಧ ಪಕ್ಷವಾಗಿರುವ ಲೇಬರ್ ಪಾರ್ಟಿಯ ನಾಯಕ ಜೆರೆಮಿ ಕಾರ್ಬಿನ್ ಅವರನ್ನು ರಹಸ್ಯವಾಗಿ ಭೇಟಿ ಮಾಡಿ 370ನೇ ವಿಧಿ ನಿಷ್ಕ್ರಿಯಗೊಳಿಸಿದ ಬಳಿಕ ಕಣಿವೆ ರಾಜ್ಯದ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದ್ದು ಒಂದು ಸಂವೇದನಾ ರಹಿತ ನಡೆ. ಜೆರೆಮಿ ಕಾರ್ಬಿನ್ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ವಿರೋಧಿ ನಿಲುವು ಹೊಂದಿದ್ದಾರೆ ಹಾಗೂ ಬ್ರಿಟನ್ ಸಂಸತ್ತಿನಲ್ಲಿ ಭಾರತದ ವಿರುದ್ಧ ಗೊತ್ತುವಳಿಯನ್ನೂ ಮಂಡಿಸಿದ್ದಾರೆ. ಅಂಥ ವ್ಯಕ್ತಿಯನ್ನು ಈ ಸೂಕ್ಷ್ಮ ಸಂದರ್ಭದಲ್ಲಿ ರಹಸ್ಯವಾಗಿ ಭೇಟಿ ಮಾಡುವ ಅಗತ್ಯವೇನಿತ್ತು ಮತ್ತು ಅವರ ಜೊತೆಗೆ ಯಾವ ವಿಚಾರವಾಗಿ ಮಾತುಕತೆ ನಡೆದಿದೆ ಎನ್ನುವುದನ್ನು ದೇಶಕ್ಕೆ ತಿಳಿಸುವ ಹೊಣೆಗಾರಿಕೆ ಕಾಂಗ್ರೆಸ್‌ಗಿದೆ.
ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕೈಗೊಂಡ ನಿರ್ಧಾರವನ್ನು ಕಾಂಗ್ರೆಸ್ ಆರಂಭದಿಂದಲೂ ವಿರೋಧಿಸುತ್ತಲೇ ಇದೆ. ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ವಿಶ್ವಸಂಸ್ಥೆಯೇ ಕಾಶ್ಮೀರದ ಮೇಲೆ ಕಣ್ಗಾವಲು ಇಟ್ಟಿರುವಾಗ ಇದು ಆಂತರಿಕ ವಿಷಯ ಹೇಗಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ರಾಹುಲ್ ಗಾಂಧಿಯೂ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸರಕಾರದ ನಡೆಯನ್ನು ವಿರೋಧಿಸಿ ನೀಡಿದ ಹೇಳಿಕೆಗಳನ್ನೇ ಪಾಕಿಸ್ತಾನ ತನ್ನ ವಾದ ಮಂಡನೆಗೆ ಸಮರ್ಥನೆ ಆಗಿ ಬಳಸಿಕೊಂಡಿದೆ. ಇದಕ್ಕಾಗಿ ಕಾಂಗ್ರೆಸ್ ವ್ಯಾಪಕ ಟೀಕೆ ಮತ್ತು ಖಂಡನೆಗಳನ್ನು ಎದುರಿಸಿದೆ. ಇಷ್ಟಾಗಿಯೂ ಅದು ತನ್ನ ನಡೆಯನ್ನು ತಿದ್ದಿಕೊಂಡಿಲ್ಲ. ಗಮನಿಸಬೇಕಾದ ಅಂಶವೆಂದರೆ ವಿಶೇಷ ವಿಧಿಯನ್ನು ನಿಷ್ಕ್ರಿಯಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ತನ್ನ ಅಧಿಕೃತ ನಿಲುವು ಏನು ಎನ್ನುವುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಪಕ್ಷದ ನಾಯ ಕರಲ್ಲೇ ಈ ವಿಚಾರವಾಗಿ ಒಮ್ಮತವಿಲ್ಲ. ಆದರೆ ನಾಯಕರು ತಮಗೆ ತೋಚಿ ದಂತೆ ನೀಡುತ್ತಿರುವ ಹೇಳಿಕೆಗಳು ಪಕ್ಷವನ್ನು ಮಾತ್ರವಲ್ಲದೆ ದೇಶವನ್ನು ಕೂಡ ಇಕ್ಕಟ್ಟಿಗೆ ಸಿಲುಕಿಸುತ್ತಿವೆ ಎನ್ನುವುದನ್ನು ಆ ಪಕ್ಷದ ವರಿಷ್ಠ ನಾಯಕರು ಗಮನಿಸುವ ಅಗತ್ಯವಿದೆ.
ದೇಶದಲ್ಲಿ ಸೂಕ್ಷ್ಮ ಪರಿಸ್ಥಿತಿ ಇರು ವಾಗ ಕಾಂಗ್ರೆಸ್ ಹೀಗೆ ಮುಜುಗರ ವಾಗುವಂಥ ನಡೆಗಳನ್ನು ಇಡುತ್ತಿರು ವುದು ಇದೇ ಮೊದಲೇನಲ್ಲ. ಡೋಕ್ಲಾಂ ಬಿಕ್ಕಟ್ಟು ತಾರಕಕ್ಕೇರಿ ರುವಾಗಲೇ ಆಗ ಪಕ್ಷದ ಉಪಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ದಿಲ್ಲಿಯಲ್ಲಿ ಚೀನದ ದೂತವಾಸ ಕಚೇರಿಯ ಅಧಿಕಾರಿಗಳನ್ನು ರಹಸ್ಯವಾಗಿ ಭೇಟಿ ಮಾಡಿದ್ದರು. ಮಾಧ್ಯಮಗಳಲ್ಲಿ ಈ ಭೇಟಿಯ ಮಾಹಿತಿ ಸೋರಿಕೆಯಾದರೂ ನಿರಾಕರಿಸಿದ್ದ ಕಾಂಗ್ರೆಸ್ ಕೊನೆಗೆ ಗತ್ಯಂತರವಿಲ್ಲದೆ ಒಪ್ಪಿಕೊಂಡಿತ್ತು. ಅನಂತರ ರಾಹುಲ್ ಗಾಂಧಿ ಮಾನಸ ಸರೋವರ ಯಾತ್ರೆಯನ್ನೂ ಚೀನ ಮಾರ್ಗವಾಗಿ ಕೈಗೊಂಡಿದ್ದರು ಹಾಗೂ ಆಗಲೂ ಚೀನದ ಉನ್ನತ ಅಧಿಕಾರಿಗಳು ಅವರನ್ನು ಭೇಟಿ ಮಾಡಿದ್ದಾರೆ ಎಂಬ ಗುಮಾನಿ ಇತ್ತು. ಈ ಭೇಟಿ ಏಕಾಗಿ ಆಯಿತು, ಯಾವ ವಿಷಯಗಳನ್ನು ಚರ್ಚಿಸಲಾಗಿದೆ ಎಂಬಿತ್ಯಾದಿ ವಿಷಯಗಳನ್ನು ಕಾಂಗ್ರೆಸ್ ಇಂದಿಗೂ ದೇಶದ ಮುಂದೆ ತೆರೆದಿಟ್ಟಿಲ್ಲ.
ಕಾಶ್ಮೀರ ನಮ್ಮ ಆಂತರಿಕ ವಿಚಾರ ಎಂದು ಸರಕಾರ ಪದೇ ಪದೇ ಒತ್ತಿ ಹೇಳುತ್ತಿದೆ. ಅಮೆರಿಕ, ಚೀನ, ಟರ್ಕಿ ಸೇರಿದಂತೆ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಲು ಯತ್ನಿನಿಸಿದ ಎಲ್ಲ ದೇಶಗಳಿಗೂ ಭಾರತ ನಮ್ಮ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಖಡಕ್ ಆಗಿಯೇ ಹೇಳಿದೆ. ಹೀಗಿರುವಾಗ ಕಾಂಗ್ರೆಸ್ ನಿಯೋಗ ಬ್ರಿಟನ್ ನಾಯಕನನ್ನು ಭೇಟಿಯಾಗಿ ಕಾಶ್ಮೀರ ವಿಚಾರವನ್ನು ಚರ್ಚಿಸಿರುವುದು ರಾಜಕೀಯವಾಗಿ ಮಾತ್ರವಲ್ಲದೆ ದೇಶದ ಹಿತಾಸಕ್ತಿಯ ದೃಷ್ಟಿಯಿಂದಲೂ ಸಮಂಜಸವಾದ ನಡೆಯಲ್ಲ. ನಮ್ಮೊಳಗಿನ ರಾಜಕೀಯ ವಿರೋಧಿ , ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇದನ್ನು ತೋರಿಸಬಾರದು ಎನ್ನುವುದು ಸಾಮಾನ್ಯ ಜನರಿಗೂ ಗೊತ್ತಿರುವ ವಿಚಾರ. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ಗೆ ಏನೇ ತಕರಾರು ಇದ್ದರೂ ಅದನ್ನು ಚರ್ಚಿಸಲು ಸಂಸತ್ತು ಸೇರಿದಂತೆ ದೇಶದೊಳಗೆ ಅನೇಕ ವೇದಿಕೆಗಳಿವೆ. ಬಹಳಷ್ಟು ವರ್ಷ ದೇಶವಾಳಿರುವ ಒಂದು ಪಕ್ಷ ಸೂಕ್ಷ್ಮ ವಿಚಾರಗಳಲ್ಲಿ ಹೀಗೆ ಬೇಜವಾಬ್ದಾರಿ ಯಿಂದ ವರ್ತಿಸುವುದು ಸರಿಯಲ್ಲ.