Advertisement

ಕಾಂಗ್ರೆಸ್‌ನಿಂದ ದ್ವೇಷದ ರಾಜಕಾರಣ: ಸಂಸದ ನಳಿನ್‌

09:45 AM Mar 31, 2018 | Karthik A |

ಕಿನ್ನಿಗೋಳಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೇರಳದಲ್ಲಿನ ದ್ವೇಷದ ರಾಜಕಾರಣ ನಮ್ಮ ಜಿಲ್ಲೆಗೂ ಹಬ್ಬಿದೆ. ಕಿನ್ನಿಗೋಳಿ ಪರಿಸರದಲ್ಲಿ ನಡೆದ ಬಿಜೆಪಿ ನಾಯಕನ ಹತ್ಯೆ ಯತ್ನ ಸಂಚಿನ ಹಿಂದೆ ಕಾಂಗ್ರೆಸ್‌ ಪಕ್ಷದವರ ಕೈವಾಡವಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು. ಶುಕ್ರವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕನ ಹತ್ಯೆಗೆ ದೊಡ್ಡ ಮಟ್ಟದಲ್ಲಿ ಸಂಚು ನಡೆದಿರುವುದು ಪೊಲೀಸ್‌ ಇಲಾಖೆಗೆ ತಿಳಿದಿದ್ದರೂ ಅದನ್ನು ದರೋಡೆ ಸಂಚು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದನ್ನೇ ಸತ್ಯ ಎಂದು ಮಾಧ್ಯಮಗಳ ಮೂಲಕ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು.

Advertisement

ಪ್ರಕರಣಕ್ಕೆ ಸಂಬಂಧಿಸಿ 6 ಮಂದಿಯ ಬಂಧನವಾಗಿದ್ದರೂ ಮೂವರ ಹೆಸರನ್ನಷ್ಟೇ ಉಲ್ಲೇಖೀಸಲಾಗಿದೆ. ಪ್ರಕರಣದ ಸೂತ್ರಧಾರನಾಗಿರುವ ಕ್ರಿಮಿನಲ್‌ ಹಿನ್ನೆಲೆಯ ನವೀನ್‌ ಕುಮಾರ್‌ ಕಟೀಲು ಎಂಬಾತನನ್ನು ಬಂಧಿಸಿಲ್ಲ. ಇದರ ಸತ್ಯಾಸತ್ಯತೆ ಹೊರಬರಬೇಕು. ಇಲ್ಲದ್ದಿದರೆ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾಫಿಯಾಗಳಿಗೆ ಕಾಂಗ್ರೆಸ್‌ ಬೆಂಬಲ
ಕಿನ್ನಿಗೋಳಿ, ಕಟೀಲು, ಕೆಮ್ರಾಲ್‌ ಪರಿಸರದಲ್ಲಿ ಕ್ರಿಮಿನಲ್‌ ಹಿನ್ನೆಲೆಯ ಅಯ್ಯಪ್ಪ ಮತ್ತು ಆತನ ತಂಡ ಸಕ್ರಿಯವಾಗಿದೆ. ಇಂತಹ ತಂಡಗಳನ್ನು ಕಾಂಗ್ರೆಸ್‌ ಪಕ್ಷ ಪರೋಕ್ಷ ಬೆಂಬಲ ನೀಡಿ ಪೋಷಿಸುತ್ತದೆ. ಇದೇ ತಂಡದಿಂದ ಕೇಶವ ಶೆಟ್ಟಿ ಅವರ ಕೊಲೆ ನಡೆದಿದೆ. ಇದಕ್ಕೆ ಸಾಥ್‌ ನೀಡುವ ನವೀನ್‌ ಕುಮಾರ್‌ ಕಟೀಲುವನ್ನು ಬಂಧಿಸಬೇಕು ಎಂದರು. ಸುಖಾನಂದ ಶೆಟ್ಟಿ ಅವರ ಹತ್ಯೆಗೆ ಸಂಚು ನಡೆದಾಗ ಅದರ ಅರಿವಿದ್ದರೂ ಪೋಲಿಸ್‌ ಇಲಾಖೆ ಗಂಭೀರವಾಗಿ ಪರಿಗಣಿಸದ ಕಾರಣ ಅವರ ಹತ್ಯೆ ನಡೆದುಹೋಯಿತು. ಒಬ್ಬ ಉತ್ತಮ ನಾಯಕನ್ನು ಕಳೆದುಕೊಂಡೆವು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಆರೋಪಿಸಿದರು.

ಇಲಾಖೆಯಿಂದ ಮಾಹಿತಿ: ಈಶ್ವರ ಕಟೀಲು
ಕಿನ್ನಿಗೋಳಿಯ ಸುಖಾನಂದ ಶೆಟ್ಟಿ ಸರ್ಕಲ್‌ ಬಳಿ ಹಾಗೂ ಕಟೀಲಿನಲ್ಲಿ ನನ್ನ ವಾಹನಕ್ಕೆ ಕ್ರಿಮಿನಲ್‌ಗ‌ಳ ತಂಡವೊಂದು ವಾಹನವನ್ನು ಅಡ್ಡ ಇಟ್ಟು ತಡೆಯಲು ಯತ್ನಿಸಿತ್ತು. ನನ್ನ ವಾಹನವನ್ನು ಬೇರೆ ರಾಜ್ಯದ ಕಾರೊಂದು ಹಿಂಬಾಲಿಸುವುದೂ ಗಮನಕ್ಕೆ ಬಂದಿದೆ. ಕಳೆದ 15 ದಿನಗಳ ಹಿಂದೆ ಪೊಲೀಸ್‌ ಇಲಾಖೆಯೂ ಎಚ್ಚರ ವಹಿಸುವಂತೆ ಮಾಹಿತಿ ನೀಡಿತ್ತು. ನವೀನ್‌ ಕುಮಾರ್‌ ಕಟೀಲು ಕಡೆಯವರು ಕಾಂಗ್ರೆಸ್‌ ಪಕ್ಷದ ಕೃಪಾಕಟಾಕ್ಷದಲ್ಲಿ ಹಫ್ತಾ ವಸೂಲಿ, ಅಕ್ರಮ ಸಾರಾಯಿ ಮಾರಾಟ ರಾಜಾರೋಷವಾಗಿ ಸಡೆಸುತ್ತಿದ್ದಾರೆ ಎಂದು ಈಶ್ವರ ಕಟೀಲು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನಾಯಕರಾದ ಉಮಾನಾಥ ಕೋಟ್ಯಾನ್‌, ಸುದರ್ಶನ್‌ ಮೂಡಬಿದಿರೆ, ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಭುವನಾಭಿರಾಮ ಉಡುಪ, ಸುಖೇಶ್‌ ಶಿರ್ತಾಡಿ, ಜಯಾನಂದ ಮೂಲ್ಕಿ, ಅಭಿಲಾಶ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next