ಹುಬ್ಬಳ್ಳಿ: ಸ್ವಾತಂತ್ರ್ಯಾನಂತರ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದೀನ ದಲಿತರಿಗೆ ಶಾಪವಾಗಿ ಪರಿಣಮಿಸಿದ್ದು, ಇದರಿಂದಲೇ ಎಸ್‌ಸಿ-ಎಸ್‌ಟಿಯವರಿಗೆ ಹೀನಾಯ ಸ್ಥಿತಿ ಬಂದಿದೆ ಎಂದು ಶಾಸಕ ಗೋವಿಂದ ಕಾರಜೋಳ ಆರೋಪಿಸಿದರು. ಗೋಕುಲ ರಸ್ತೆಯ ಗೋಕುಲ ಗಾರ್ಡನ್‌ದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿರಾ ಗಾಂಧಿ ಗರೀಬಿ ಹಠಾವೋ ಎಂದರು. ಆದರೆ ಧರ್ಮ, ಜಾತಿಗಳ ಹೆಸರಿನಲ್ಲಿ ಮತ ಬ್ಯಾಂಕ್ ಸೃಷ್ಟಿಸಿ ಜಾತಿಗಳನ್ನು ಒಡೆದರು. ಈಗ ಅವರ ಮೊಮ್ಮಗ ರಾಹುಲ್ ಗಾಂಧಿ ದೇಶದ 25 ಕೋಟಿ ಕಡುಬಡವರಿಗೆ ತಿಂಗಳಿಗೆ 6 ಸಾವಿರ ರೂ. ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ. ಇದು ಅನುಷ್ಠಾನಗೊಂಡರೆ ವರ್ಷಕ್ಕೆ 18 ಲಕ್ಷ ಕೋಟಿ ರೂ. ಬೇಕು. ಬಡವರಿಗೆ ಏನು ಮಲ್ಲಯ್ಯನ ಬೆಲ್ಲ ಹಂಚಿದಂತೆ ಹಂಚುತ್ತಾರೆಯೇ? ಇನ್ನುಳಿದ ಯೋಜನೆಗಳಿಗೆ ಎಲ್ಲಿಂದ ಹಣ ತರುತ್ತಾರೆ. ರಾಹುಲ್‌ಗೆ ಅರ್ಥವ್ಯವಸ್ಥೆಯ ಕನಿಷ್ಟ ಜ್ಞಾನ ಕೂಡ ಇಲ್ಲ ಎಂದು ಹರಿಹಾಯ್ದರು.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಗೂಂಡಾಗಿರಿ, ಕೊಲೆ ಮಾಡುವ, ಹೆಂಡ-ಹಣ ಹಂಚುವವರನ್ನು ಆರಿಸಿ ತರದೆ ಸುಸಂಸ್ಕೃತರಾದ, ಸಭ್ಯರಾದ ಜೋಶಿಯವರನ್ನು ಆರಿಸಿ ತನ್ನಿ ಎಂದರು.
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಮಾತನಾಡಿ, ಪ್ರಧಾನಿ ಮೋದಿ ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನ ತಿದ್ದುಪಡಿ ಮಾಡಲ್ಲ. ಆದರೆ ವಿಪಕ್ಷದವರು ಈ ಕುರಿತು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಶಾಸಕರಾದ ರಾಜೀವ ಪಿ., ಶಿವನಗೌಡ ನಾಯ್ಕ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಶಂಕರಣ್ಣ ಬಿಜವಾಡ ಮಾತನಾಡಿದರು. ಅರುಣ ಹುದ್ಲಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಮನೋಹರ ಐನಾಪುರ, ನಾಗೇಶ ಕಲಬುರ್ಗಿ, ಈರಣ್ಣ ಜಡಿ, ಚಂದ್ರಶೇಖರ ಗೋಕಾಕ, ಲಕ್ಷ್ಮಣ ಬೀಳಗಿ, ವೀರಣ್ಣಗೌಡ ಪಾಟೀಲ, ಸಿ.ಟಿ. ಪಾಟೀಲ, ಪ್ರಕಾಶ ದಾಸನವರ ಇದ್ದರು. ನಾಗರಾಜ ಟಗರಗುಂಟಿ ಸ್ವಾಗತಿಸಿದರು. ಮಹೇಂದ್ರ ಕೌತಾಳ ನಿರೂಪಿಸಿದರು. ಅರ್ಜುನ ಲಮಾಣಿ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ವಾಲ್ಮೀಕಿ ವಂದಿಸಿದರು.
ಜಾತಿ ಮುಂದಿಟ್ಟು ಮತಯಾಚನೆ ಸಲ್ಲ: ವಿನಯ್‌ಗೆ ಕೋರೆ ಟಾಂಗ್
ಹುಬ್ಬಳ್ಳಿ: ಲಿಂಗಾಯತರು ಒಂದೇ ಪಕ್ಷಕ್ಕೆ ಸೀಮಿತವಾಗಿಲ್ಲ. ದೇಶದ ಪ್ರಗತಿ ಹಾಗೂ ತಾವು ಮಾಡಿದ ಕ್ಷೇತ್ರದ ಅಭಿವೃದ್ಧಿ
ಯೋಜನೆಗಳ ಮೇಲೆ ಮತ ಕೇಳಬೇಕು ವಿನಃ ಜಾತಿ ಮುಂದಿಟ್ಟುಕೊಂಡು ಮತಯಾಚನೆ ಮಾಡಬಾರದು ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಎಲ್ಲಾ ಸಮಾಜದ ಮುಖಂಡರು ಜೋಶಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಪ್ರಹ್ಲಾದ ಜೋಶಿ ಅವರ ಗೆಲುವು ನಿಶ್ಚಿತವಾಗಿದೆ. ಹಾವೇರಿ ಕ್ಷೇತ್ರದಿಂದ ಶಿವಕುಮಾರ ಉದಾಸಿ ಕೂಡ ಮೂರನೇ ಬಾರಿಗೆ ಲೋಕಸಭೆ ಪ್ರವೇಶ ಮಾಡುವುದು ಖಚಿತವಾಗಿದೆ ಎಂದರು. ಉಕ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದು, ಜನರ ಅಭಿಪ್ರಾಯ, ಮೋದಿಯವರ ಮೇಲಿರುವ ನಿರೀಕ್ಷೆ ಹಾಗೂ ಭರವಸೆ ನೋಡಿದಾಗ ಈ ಭಾಗದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಜಯ ಗಳಿಸಲಿದೆ. ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕೊಡುಗೆ ಬಿಜೆಪಿಗೆ ವರವಾಗಿದೆ.
ಕೇಂದ್ರ ಸರಕಾರದ ಹತ್ತು ಹಲವು ಯೋಜನೆಗಳಿಂದ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿಯಾಗಿವೆ. ಪರೋಕ್ಷವಾಗಿ ಕೋಟ್ಯಂತರ ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ. ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳ ಕೊರತೆ ಎದ್ದು ಕಾಣುತ್ತಿರುವುದರಿಂದ ಈ ಕ್ಷೇತ್ರದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎಂದು ವಿವರಿಸಿದರು.
ಮೋದಿ-ಜೋಶಿ ಗೆಲುವು ನಿಶ್ಚಿತ: ಶೆಟ್ಟರ್
ಧಾರವಾಡ: ನರೇಂದ್ರ ಮೋದಿ ಹಾಗೂ ಪ್ರಹ್ಲಾದ ಜೋಶಿ ಅವರ ಗೆಲುವು ನಿಶ್ಚಿತವಾಗಿದ್ದು, ಕೇಂದ್ರದಲ್ಲಿ ಮತ್ತೂಮ್ಮೆ ಮೋದಿ ಸರಕಾರ ರಚನೆ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು. ಮಟ್ಟಿಪರಪ್ಪನ ಕೂಟದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಈಗ ವಿದೇಶಗಳಲ್ಲಿ ಭಾರತೀಯರಿಗೆ ಎಲ್ಲಿಲ್ಲದ ಗೌರವ ಸಿಗಲು ಮೋದಿ ಅವರ ಮೋಡಿಯೇ ಕಾರಣ. ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಮೋದಿ ಅವರು ದೇಶದಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದ್ದಾರೆ. ದೇಶದ ಸುಭದ್ರತೆ ಹಾಗೂ ಅಭಿವೃದ್ಧಿಗೆ ಮೋದಿ ಸರಕಾರ ಮತ್ತೂಮ್ಮೆ ಬರಲೇಬೇಕಿದೆ ಎಂದರು. ಶಾಸಕ ಅಮೃತ ದೇಸಾಯಿ ಮಾತನಾಡಿ, ಜನರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಪ್ರಹ್ಲಾದ ಜೋಶಿ ಅವರು ಸರಳ ಸಜ್ಜನಿಕೆಯ, ಕಪ್ಪುಚುಕ್ಕೆಯಿಲ್ಲದ ರಾಜಕಾರಣಿ.
ಜಿಲ್ಲೆಗೆ ಜೋಶಿ ಅವರು ಮಾಡಿರುವ ಕಾರ್ಯ ಸಾಧನೆ ಮೇಲೆಯೇ ಮತ ಕೇಳುತ್ತಾ ಇದ್ದು, ಇದರಿಂದ ಹತಾಶರಾಗಿರುವ ಎದುರಾಳಿಗಳು ಕೇವಲ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದರು. ಸೀಮಾ ಮಸೂತಿ, ಈರೇಶ ಅಂಚಟಗೇರಿ, ಟಿ.ಎಸ್. ಪಾಟೀಲ, ಬಾಪುಗೌಡ ಪಾಟೀಲ, ಶಂಕರ ಶೆಳಕೆ, ನಿರ್ಮಲಾ ಜವಳಿ ಇದ್ದರು.
ಜೋಶಿ ಶುದ್ಧ ಹಸ್ತದ ರಾಜಕಾರಣಿ: ಶೆಟ್ಟರ್
ಹುಬ್ಬಳ್ಳಿ: ಪ್ರಾಮಾಣಿಕ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿಯಂತೆ ಸಂಸದ ಪ್ರಹ್ಲಾದ ಜೋಶಿ ಕೂಡ ಶುದ್ಧ ಹಸ್ತದ ರಾಜಕಾರಣಿಯಾಗಿದ್ದು, ಇವರನ್ನು ನಾಲ್ಕನೇ ಬಾರಿಗೆ ಆಯ್ಕೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು. ನೂತನ ನ್ಯಾಯಲಯ ಸಂಕೀರ್ಣದಲ್ಲಿ ವಕೀಲರ ಸಂಘದೊಂದಿಗೆ ಪ್ರಚಾರಾರ್ಥ ಮಾತನಾಡಿದ ಅವರು, ಪ್ರಹ್ಲಾದ ಜೋಶಿಯವರು ಇಷ್ಟು ವರ್ಷಗಳ ರಾಜಕೀಯ ಇತಿಹಾಸದಲ್ಲಿ ಕ್ಷೇತ್ರದ ಜನರು ತಲೆತಗ್ಗಿಸುವಂತಹ ಕೆಟ್ಟ ಕೆಲಸ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಜೋಶಿಯವರನ್ನು ಗೆಲ್ಲಿಸುವ ಮೂಲಕ ಮೋದಿಯವರ ಕೈ ಬಲಪಡಿಸಬೇಕು ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಮಾತನಾಡಿದರು. ಶಾಸಕ ಗೋವಿಂದ ಕಾರಜೋಳ, ರಮೇಶ ಬಾಬು, ಮೋಹನ ಲಿಂಬಿಕಾಯಿ, ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ, ಉಪಾಧ್ಯಕ್ಷ ಎಸ್.ವಿ. ಕೊಪ್ಪರ, ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ, ಅಶೋಕ ಅಣವೇಕರ, ಲೋಕೇಶ ಎಂ. ಶೋಭಾ ಪವಾರ ಇನ್ನಿತರರಿದ್ದರು
ನಾಳೆ ಯೋಗಿ ಆದಿತ್ಯನಾಥ ಆಗಮನ
ಧಾರವಾಡ: ಪ್ರಹ್ಲಾದ ಜೋಶಿ ಪರ ಪ್ರಚಾರಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ ಏ. 17ರಂದು ನಗರಕ್ಕೆ ಆಗಮಿಸಲಿದ್ದಾರೆ ಎಂದು ವಿಪ ಸದಸ್ಯ ಪ್ರದೀಪ ಶೆಟ್ಟರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಂಜೆ 4 ಗಂಟೆಗೆ ಹುರಕಡ್ಲಿ ಮೈದಾನದಲ್ಲಿ ಆಯೋಜಿಸಿರುವ ಪ್ರಚಾರ ಸಭೆಯಲ್ಲಿ ಯೋಗಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿರುವ ಜೋಶಿ ಅವರ ಗೆಲುವು ಶತಸಿದ್ಧ. ಜಿಲ್ಲೆಯ ಮತದಾರರು ಅಭಿವೃದ್ಧಿಯ ಮುಖ ನೋಡಿ ಬಿಜೆಪಿಗೆ ಮತ ಹಾಕಲಿದ್ದು, ಈ ಮೂಲಕ 4ನೇ ಬಾರಿ ಸಂಸದರಾಗಿ ಜೋಶಿ ಅವರು ಆಯ್ಕೆ ಆಗಲಿದ್ದಾರೆ. ಮತ್ತೆ ಕೇಂದ್ರದಲ್ಲಿ ಮೋದಿ ಸರಕಾರವೇ ಅಧಿಕಾರದ ಗದ್ದುಗೆ ಏರಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿಜಯಾನಂದ ಶೆಟ್ಟಿ, ಸಂಜಯ ಕಪಟಕರ, ಮೋಹನ ರಾಮದುರ್ಗ ಇದ್ದರು.