ಬೆಂಗಳೂರು: ಹದಿನೈದು ಕ್ಷೇತ್ರಗಳ ಉಪ ಚುನಾವಣೆಗೆ ಮತದಾನ ನಡೆದಿದ್ದು, ಮತದಾರ ನಿಟ್ಟುಸಿರು ಬಿಟ್ಟಿದ್ದು, ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ನಾಯಕರು ಡಿಸೆಂಬರ್ 9 ರ ವರೆಗೆ ಉಸಿರು ಬಿಗಿ ಹಿಡಿದುಕೊಂಡು ಕಾಯುವಂತೆ ಮಾಡಿದೆ.
ಹದಿನೈದು ಕ್ಷೇತ್ರಗಳಲ್ಲಿ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇತ್ತು. ಕಾಂಗ್ರೆಸ್ ಆಂತರಿಕ ಲೆಕ್ಕಾಚಾರದ ಪ್ರಕಾರ ಹದಿನೈದು ಕ್ಷೇತ್ರಗಳಲ್ಲಿ ಕನಿಷ್ಠ ಐದು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಕಾಂಗ್ರೆಸ್ ಹೊಂದಿದೆ. ಪ್ರಮುಖವಾಗಿ ಗೋಕಾಕ್, ಕಾಗವಾಡ, ರಾಣೆಬೆನ್ನೂರು, ಶಿವಾಜಿನಗರ ಹಾಗೂ ಹುಣಸೂರು ಕ್ಷೇತ್ರಗಳನ್ನು ಸಲೀಸಾಗಿ ಗೆಲ್ಲುವ ವಿಶ್ವಾಸವನ್ನು ಕಾಂಗ್ರೆಸ್ ನಾಯಕರು ಹೊಂದಿದ್ದು, ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ, ಹಿರೆಕೆರೂರು ಹಾಗೂ ಕೆ.ಆರ್. ಪೇಟೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದ್ದು, ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್,ಬಿಜೆಪಿ ಜೊತೆ ತ್ರಿಕೋನ ಸ್ಫರ್ಧೆ ಏರ್ಪಟ್ಟಿದ್ದು, ಜೆಡಿಎಸ್ ಅಭ್ಯರ್ಥಿ ತೆಗೆದುಕೊಳ್ಳುವ ಮತ ಕಾಂಗ್ರೆಸ್ ಗೆಲುವಿಗೆ ಅನುಕೂಲವಾಗುತ್ತದೆ ಎನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.
ಹಿರೆಕೆರೂರಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದು, ಬಿಜೆಪಿ ಅಭ್ಯರ್ಥಿಯ ಹಣ ಬಲದ ಮುಂದೆ ಕಾಂಗ್ರೆಸ್ ಅಭ್ಯರ್ಥಿಯ ಒಳ್ಳೆಯ ನಡತೆ ಮತದಾರನ ಮನಗೆಲ್ಲಲು ಪೂರಕವಾಗಿದೆ ಎನ್ನುವ ಆಶಾ ಭಾವನೆ ಕಾಂಗ್ರೆಸ್ ನಾಯಕರು ಇಟ್ಟುಕೊಂಡಿದ್ದಾರೆ.
ಇನ್ನು ಕೆ.ಆರ್. ಪೇಟೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿ ಎಷ್ಟು ಮತ ಪಡೆದುಕೊಳ್ಳುತ್ತದೆ ಎನ್ನುವುದು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಅನುಕೂಲವಾಗುತ್ತದೆ ಎಂಬ ಭಾವನೆಯನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ. ಕೆ.ಆರ್.ಪುರ, ಹೊಸಕೋಟೆ, ಅಥಣಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಚ್ಚರಿಯ ಫಲಿತಾಂಶ ನಿರೀಕ್ಷೆಯಲ್ಲಿದೆ.
ಆದರೆ, ಹಾಲಿ ಬಿಜೆಪಿ ಸರ್ಕಾರವನ್ನು ಪತನಗೊಳಿಸುವಷ್ಟು ಕ್ಷೇತ್ರಗಳನ್ನು ಎರಡೂ ಪಕ್ಷಗಳು ಗೆಲ್ಲುವ ಬಗ್ಗೆ ಕಾಂಗ್ರೆಸ್ ನಾಯಕರು ವಿಶ್ವಾಸ ಇಟ್ಟುಕೊಂಡಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಗೆಲ್ಲುವ ಕ್ಷೇತ್ರಗಳ ಸಮಾನ ಹಂಚಿಕೆಯಾಗುವ ಸಾಧ್ಯತೆ ಹೆಚ್ಚಿದ್ದು, ಎರಡರಿಂದ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುವ ಸಾಧ್ಯತೆಯನ್ನು ಕಾಂಗ್ರೆಸ್ ಮತದಾನೋತ್ತರ ಆಂತರಿಕ ಲೆಕ್ಕಾಚಾರದ ಮೂಲಕ ಕಂಡುಕೊಂಡಿದ್ದಾರೆ.
ಈ ಚುನಾವಣೆಯನ್ನು ಕಾಂಗ್ರೆಸ್ ಅತ್ಯಂತ ಯಶಸ್ವಿಯಾಗಿ ಎದುರಿಸಿದೆ. ಕನಿಷ್ಠ 8 ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಎರಡು ಮೂರು ಕ್ಷೇತ್ರಗಳಲ್ಲಿ ಟಫ್ ಫೈಟ್ ಇದೆ. ಜನರಿಗೆ ಅನರ್ಹರ ಮೇಲೆ ಆಕ್ರೋಶ ಇರುವುದರಿಂದ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.