Advertisement
ಬ್ರಿಟೀಶ್ ಆಡಳಿತ ದೇಶದಲ್ಲಿ ಉಪ್ಪಿನ ಮೇಲೆ ಹೇರಿದ್ದ ಕರವನ್ನು ವಿರೋಧಿಸಿ ಮಹಾತ್ಮಾ ಗಾಂಧೀಜಿಯವರು ಕೈಗೊಂಡಿದ್ದ ‘ದಂಡಿ’ ಯಾತ್ರೆಗೆ 89 ವರ್ಷಗಳು ಸಂದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಬೊಗಸೆ ತುಂಬಾ ಉಪ್ಪು ತುಂಬಿದ ಕೈಗಳು ಸಾಮ್ರಾಜ್ಯವೊಂದನ್ನು ಅಲುಗಾಡಿಸಿದಾಗ’ ಎಂಬ ವಿಶಿಷ್ಟ ಶೀರ್ಷಿಕೆ ಇರುವ ಬ್ಲಾಗ್ ಬರಹವೊಂದನ್ನು ಬರೆದಿದ್ದು ಅದರಲ್ಲಿ ಪ್ರಧಾನಿ ಮೋದಿ ಅವರು ‘ಕೈ’ ಪಕ್ಷದ ವಿರುದ್ಧ ಈ ರೀತಿಯ ಗಂಭೀರ ಆರೋಪವನ್ನು ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿಯವರು ಅಂದು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಂಘಟಿತವಾಗಿ ಕೈಗೊಂಡ ದಂಡಿ ಯಾತ್ರೆಯಿಂದ ಯಾವ ರೀತಿ ಒಂದು ಸಾಮ್ರಾಜ್ಯವೇ ನಡುಕವನ್ನನುಭವಿಸಿತು ಎಂಬ ಅರ್ಥಬರುವಂತೆ ತಮ್ಮ ಬ್ಲಾಗ್ ಗೆ ಈ ಶೀರ್ಷಿಕೆಯನ್ನು ಇರಿಸಿದ್ದಾರೆ.
Related Articles
Advertisement
ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಗಂಭಿರ ಆರೋಪ ಮಾಡಿರುವ ಪ್ರಧಾನಿ ಮೋದಿ ಅವರು ಈ ದೇಶದಲ್ಲಿ ನಡೆದಿರುವ ಪ್ರಮುಖ ಹಗರಣಗಳಲ್ಲೆಲ್ಲಾ ಕಾಂಗ್ರೆಸ್ ಪಕ್ಷವು ಭಾಗಿಯಾಗಿದೆ ಎಂದು ಕುಟುಕಿದ್ದಾರೆ. ಇನ್ನು ಮಹಾತ್ಮಾ ಗಾಂಧೀಜಿಯವರು ವಂಶಪಾರಂಪರ್ಯ ಆಡಳಿತಕ್ಕೆ ವಿರುದ್ಧವಾಗಿದ್ದರು. ಆದರೆ ಈ ಕಾಂಗ್ರೆಸ್ ಪಕ್ಷವು ಅಂದಿನಿಂದ ಇವತ್ತಿನವರೆಗೂ ವಂಶಪಾರಂಪರ್ಯ ಆಡಳಿತಕ್ಕೇ ನೆಚ್ಚಿಕೊಂಡಿದೆ ಮತ್ತು ಅದರ ಹೊರತಾದ ಕಲ್ಪನೆಯನ್ನೂ ಸಹ ಆ ಪಕ್ಷದಲ್ಲಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ದುರ್ಬಲರಿಗೆ ಮತ್ತು ಪ್ರಬಲರಿಗೆ ಸಮಾನ ಅವಕಾಶವನ್ನು ನೀಡುವುದೇ ಪ್ರಜಾಪ್ರಭುತ್ವದ ವಿಶೇಷ ಲಕ್ಷಣ ಎಂದು ಬಾಪೂ ಅವರ ಅಭಿಪ್ರಾಯವಾಗಿತ್ತು ಆದರೆ 1975ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದ ಆಶಯಗಳನ್ನೇ ಬಲಿಕೊಟ್ಟಿತ್ತು ಎಂಬ ಗಂಭೀರ ಟೀಕೆಯನ್ನು ಅವರು ತಮ್ಮ ಬ್ಲಾಗ್ ನಲ್ಲಿ ಮಾಡಿದ್ದಾರೆ.
ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷವು ಸಂವಿಧಾನದ 356ನೇ ವಿಧಿಯನ್ನು ಹಲವಾರು ಬಾರಿ ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ದುರುಪಯೋಗ ಮಾಡಿಕೊಂಡಿದೆ, ಇವೆಲ್ಲವೂ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿದ್ದ ತತ್ವಗಳಿಗೆ ವಿರುದ್ಧವಾಗಿತ್ತು ಎಂದು ಬರೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ನಿಜ ಬಣ್ಣವನ್ನು ಬಯಲು ಮಾಡುವ ಪ್ರಯತ್ನವನ್ನು ಪ್ರಧಾನಿಯವರು ತಮ್ಮ ಈ ಬ್ಲಾಗ್ ಲೇಖನದಲ್ಲಿ ಮಾಡಿದ್ದಾರೆ. ತಮ್ಮ ಈ ಬ್ಲಾಗ್ ನ ಲಿಂಕ್ ಅನ್ನು ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲೂ ಹಂಚಿಕೊಂಡಿದ್ದಾರೆ.