ಹುಬ್ಬಳ್ಳಿ: ಕಳೆದ 70 ವರ್ಷಗಳಿಂದ ಹಿಂದೂ-ಮುಸ್ಲಿಂ ಸಮಾಜಗಳ ನಡುವೆ ದೊಡ್ಡ ಕಂದಕ ನಿರ್ಮಾಣ ಮಾಡುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಆರೋಪಿಸಿದರು.
ಕುಂದಗೋಳ ತಾಲೂಕಿನ ಕಳಸ ಗ್ರಾಮದಲ್ಲಿ ನಡೆದ ಹಲ್ಲೆಯಲ್ಲಿ ಗಾಯಗೊಂಡು ನಗರದ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರವೀಣ ಕಳಸೂರ ಹಾಗೂ ಪ್ರವೀಣ ಬಡ್ನಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಮತ ರಾಜಕಾರಣಕ್ಕಾಗಿ ಕಾಂಗ್ರೆಸ್ ಎರಡು ಧರ್ಮದ ನಡುವೆ ಸಂಘರ್ಷ ಏರ್ಪಡುವಂತಹ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಕಾಂಗ್ರೆಸ್ ನಾಯಕರು ರಾಜಕಾರಣಕ್ಕಾಗಿ ಸಮಾಜವನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಇವರಿಗೆ ಶಾಂತಿ ನೆಲೆಸುವುದು ಬೇಕಾಗಿದ್ದರೆ ದುಷ್ಕರ್ಮಿಗಳ ಬೆನ್ನಿಗೆ ನಿಲ್ಲುತ್ತಿರಲಿಲ್ಲ.
ಕಳಸ ಗ್ರಾಮದಲ್ಲಿ ನಡೆದ ಘಟನೆಯಲ್ಲೂ ರಾಜ್ಯ ಸರಕಾರ ದುಷ್ಕರ್ಮಿಗಳ ಬೆನ್ನಿಗೆ ನಿಂತಿದೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಪ್ರತಿ ಗ್ರಾಮದಲ್ಲಿ ಎರಡು ಗುಂಪುಗಳಾಗಿ ಸಂಘರ್ಷಕ್ಕೆ ಕಾರಣವಾಗಲಿದೆ ಎಂದರು. ಮುಸ್ಲಿಂ ಸಮಾಜದಲ್ಲೂ ಸಜ್ಜನರಿದ್ದಾರೆ. ಅವರು ಮೌನ ವಹಿಸದೆ ಇಂತಹ ಘಟನೆಗಳು ನಡೆದಾಗ ಖಂಡಿಸಬೇಕು.
ದುಷ್ಕರ್ಮಿಗಳಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡಬಾರದು. ಈ ಬಗ್ಗೆ ಸಮಾಜದ ಪ್ರಮುಖರು ಗಂಭೀರ ಚಿಂತನೆ ನಡೆಸುವಂತೆ ಮನವಿ ಮಾಡುವುದಾಗಿ ತಿಳಿಸಿದರು. ದೇವಸ್ಥಾನದ ಜಾಗ ಒತ್ತುವರಿ, ಯುವತಿಯರನ್ನು ಚುಡಾಯಿಸುವುದನ್ನು ಯಾವ ಸಮಾಜವೂ ಒಪ್ಪುವುದಿಲ್ಲ.
ಇಂತಹ ದುಷ್ಕೃತ್ಯ ಖಂಡಿಸಿದವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುವುದು ಎಷ್ಟು ಸರಿ. ಕೂಡಲೇ ಘಟನೆಗೆ ಸಂಬಂಧಿಸಿ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಪೊಲೀಸರು ಮಣಿಯಬಾರದು ಎಂದು ಒತ್ತಾಯಿಸಿದರು. ಧರ್ಮ ಜಾಗೃತಿ ಇಲ್ಲದ ಕಾರಣ ಲವ್ ಜಿಹಾದ್ ಘಟನೆಗಳು ನಡೆಯುತ್ತಿವೆ.
ಹಿಂದೂ ಯುವತಿಯರಿಗೆ ಆಮಿಷ ಅಥವಾ ಬೆದರಿಕೆ ಹಾಕಿ ಮದುವೆಯಾಗಿ ನಂತರ ಅವರನ್ನು ಪ್ರಾಣಿಗಿಂತಲೂ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿದೆ. ಲವ್ ಜಿಹಾದ್‌ಗಾಗಿಯೇ ಒಂದು ತಂಡ ಕಾರ್ಯ ನಿರ್ವಹಿಸುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮೊದಲು ಜಾಗೃತಿ ಕಾರ್ಯ ನಡೆಯಬೇಕು. ನಾವು ಕೂಡ ಈ ಬಗ್ಗೆ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.