ಧಾರವಾಡ: ರೈತರ ಸಾಲಮನ್ನಾ, ಬೆಳೆ ಪರಿಹಾರ ಹಣ ಮತ್ತು ಬೆಳೆವಿಮೆ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಹು- ಧಾ ಪಶ್ಚಿಮ ಕ್ಷೇತ್ರ-74 ಹಾಗೂ ಧಾರವಾಡ ಗ್ರಾಮೀಣ-71ರ ಕಾರ್ಯಕರ್ತರು ನಗರದ ಡಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಎದುರಾಗಿರುವ ಬರವನ್ನು ಎದುರಿಸಲು ನಮ್ಮ ಸರಕಾರ ಸಿದ್ದವಿದ್ದು, ಸಾರ್ವಜಿಕರಿಗೆ ಯಾವುದೇ ತೊಂದರೆಯಾಗಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡುತ್ತಿದ್ದಾರೆ ಹೊರತುಯಾವುದೇ ಬರಗಾಲದ ಕಾರ್ಯವನ್ನು ಮಾಡುತ್ತಿಲ್ಲ.
ಅಲ್ಲದೆ ಬರದಿಂದ ತತ್ತರಿಸಿರುವ ರೈತರಿಗೆ ಬರ ಪರಿಹಾರ ಹಣ, ಬೆಳೆವಿಮೆ ಸೇರಿದಂತೆ ಯಾವುದೇ ಹಣಕಾಸಿನ ನೆರವು ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ಸಾಲಮನ್ನಾ ಮಾಡುವಂತೆ ರೈತರು ರಾಜ್ಯ ಸರಕಾರಕ್ಕೆ ಕೇಳಿದರೆ ಕೇಂದ್ರ ಸರಕಾರದ ಕಡೆ ಬೆರಳು ಮಾಡಿ ತೋರಿಸುತ್ತಿರುವುದು ಸರಿಯಲ್ಲ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದಾಗ ಕೇಂದ್ರ ಸರಕಾರದ ನೆರವು ಪಡೆಯದೆ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಿದೆ. ಕಾಂಗ್ರೆಸ್ ಕೂಡ ಅದೇ ನೀತಿಯನ್ನು ಅನುಸರಿಸಲಿ. ರಾಜ್ಯದಲ್ಲಿ ಮೇವಿನ ಕೊರತೆ ಇರುವದರಿಂದ ದನ ಕರುಗಳು ಕಸಾಯಿಖಾನೆ ಪಾಲಾಗುತ್ತಿವೆ. ಸರಕಾರ ಪ್ರತಿ ಗ್ರಾಮಗಳಲ್ಲಿಯೂ ಮೇವು ಬ್ಯಾಂಕ್ ತೆರೆದು ಉತ್ತಮ ಗುಣಮಟ್ಟದ ಮೇವು ಪೂರೈಕೆ ಮಾಡುವಂತೆ ಒತ್ತಾಯಿಸಿದರು.
ರಾಜ್ಯ ಸರಕಾರ ಈ ಕೂಡಲೇ ರಾಜ್ಯದ ರೈತರ ಸಾಲವನ್ನು ಮನ್ನಾಮಾಡಬೇಕು. ಜಾನಾವಾರುಗಳು ಮೇವಿನ ಕೊರತೆಯಿಂದ ಕಸಾಯಿಖಾನೆ ಪಾಲಾಗುತ್ತಿದ್ದು, ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಮೇವು ಪೂರೈಕೆ ಮಾಡಬೇಕು. ರೈತರು ಬೆಳೆದ ಅಲ್ಪ ಸ್ವಲ್ಪ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಹೀಗಾಗಿ ರಾಜ್ಯ ಸರಕಾರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಆಗ್ರಹಿಸಿದರು.
ಮಾಜಿ ಶಾಸಕಿ ಸೀಮಾ ಮಸೂತಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಗೊಡಭೊಲೆ, ಈರಣ್ಣ ಅಂಬಳಿ, ಶರಣು ಅಂಗಡಿ, ಮೋಹನ ರಾಮದುರ್ಗ, ರಾಜು, ಸುಜಾತಾ ಕಳ್ಳಿಮನಿ, ಬಸವನಗೌಡ ನೀರಲಕಟ್ಟಿ, ರೂಪಾ ಚೌಧರಿ, ಅನಸೂಯಾ ಹಿರೇಮಠ, ವಿಜಯ್ ಸಾಬಳೆ, ಸುನೀಲ ಹಡಳಿ, ಈರಣ್ಣ, ಸವಿತಾ ಅಮರಶೆಟ್ಟಿ, ಸುನೀಲ್ ಗುಡಿ, ಶಶಿ ಕುಲಕರ್ಣಿ, ಪ್ರವೀಣ ಪವಾರ, ರವೀಂದ್ರದೇಸಾಯಿ, ವೀರಯ್ಯ ಚಿಕ್ಕಮಠ ಇದ್ದರು.