ಬೆಂಗಳೂರು/ಬಾಗಲಕೋಟೆ: ಪತ್ನಿಗೆ ಟಿಕೆಟ್ ಕೊಡಿಸಲು ಆಗದ ಸಂಕಷ್ಟ, ಇನ್ನೊಂದೆಡೆ ತಮ್ಮ ಮಾತೃ ಪಕ್ಷದ ಪ್ರತಿಷ್ಠೆ ಕಾಯ್ದುಕೊಳ್ಳಬೇಕಾದ ಜವಾಬ್ದಾರಿಯ ಸಂಕಷ್ಟದಲ್ಲಿ ಸಿಲುಕಿರು ಬಾಗಲಕೋಟೆ ಜಿಲ್ಲೆಯ ಹುನಗುಂದ ಶಾಸಕ ಹಾಗೂ ರಾಜ್ಯ ಸರ್ಕಾರದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಸಂಕಷ್ಟ ಪರಿಹಾರಕ್ಕೆ ಕೇರಳದ ಪ್ರಸಿದ್ಧ ಅಯ್ಯಪ್ಪಸ್ಮಾಮಿ ಮೊರೆ ಹೋಗಿದ್ದಾರೆ.
ಹೌದು, ತಮ್ಮ ಅತ್ಯಾಪ್ತ ಬೆಂಬಲಿಗರೊಂದಿಗೆ ಇರಮುಡಿ ಹೊತ್ತು ಕೇರಳಕ್ಕೆ ತೆರಳಿರುವ ವಿಜಯಾನಂದ, ಬುಧವಾರ ತಡರಾತ್ರಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಪಡೆದ ಶಾಸಕರ ಫೋಟೋಗಳನ್ನು ಅವರ ಹತ್ತಿರದ ಬೆಂಬಲಿಗರು ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪತ್ನಿ ವೀಣಾಗೆ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಪ್ಪಿದ ಕಾರಣ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ. ಒಂದು ಹಂತದಲ್ಲಿ ಪತಿ ವಿಜಯಾನಂದ ಅವರ ಮಾತೂ ಕೇಳದಷ್ಟು ಅಸಮಾಧಾನವಾಗಿದ್ದಾರೆ ಎನ್ನಲಾಗಿದೆ. ಇದೇ ಏ.15ರಂದು ಹುನಗುಂದದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಬಂದು, ಪ್ರಚಾರದಲ್ಲಿ ಪತ್ನಿ ವೀಣಾ ಕೂಡಾ ತೊಡಗುತ್ತಾರೆ. ಕಾಂಗ್ರೆಸ್ ಅಂದ್ರೆ ಕಾಶಪ್ಪನವರ ಕುಟುಂಬ. ಕಾಶಪ್ಪನವರ ಅಂದ್ರೆ ಕಾಂಗ್ರೆಸ್ ಎಂದು ಸ್ವತಃ ಶಾಸಕ ವಿಜಯಾನಂದ ಹೇಳಿದ್ದರು. ಆದರೆ, ಪತಿಯ ಮನವೋಲಿಕೆಗೂ ವೀಣಾ ಕಾಶಪ್ಪನವರ, ಸ್ಪಂದಿಸದೇ ಬೇಸರ ಮುಂದುವರೆಸಿದ್ದಾರೆ ಎನ್ನಲಾಗಿದೆ. ಇದೆಲ್ಲದರ ಹಿನ್ನೆಲೆ ಒಂದೆಡೆ ಕುಟುಂಬ, ಮತ್ತೊಂದೆಡೆ ತಂದೆಯ ಕಾಲದಿಂದಲೂ ಬಂದಿರುವ ಕಾಂಗ್ರೆಸ್ ಕುಟುಂಬ, ಎರಡನ್ನೂ ನಿಭಾಯಿಸಬೇಕಾ್ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಶಾಸಕ ವಿಜಯಾನಂದ, ಶಬರಿಮಲೈ ಅಯ್ಯಪ್ಪ ಸ್ವಾಮಿಯ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಶಾಸಕ ಕಾಶಪ್ಪನವರ ಇದೇ ಮೊದಲ ಬಾರಿಗೆ ಅಯ್ಯಪ್ಪ ಸ್ವಾಮಿಯ ವೃತ್ತಾಧಾರಿಯ ವಸ್ತ್ರದದಲ್ಲಿರುವ ಫೋಟೋಗಳೂ ವೈರಲ್ ಆಗಿವೆ. ಶಾಸಕ ಹಾಗೂ ಕರ್ನಾಟಕ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಅವರು ಬುಧವಾರ ಶಬರಿಮಲೈ ಅಯ್ಯಪ್ಪಸ್ವಾಮಿಯ ದರ್ಶನ ಪಡೆದಿದ್ದು, ಜಿ.ಪಂ. ಮಾಜಿ ಸದಸ್ಯ ಮಹಾಂತೇಶ ನರಗುಂದ ಹಾಗೂ ಅತ್ಯಾಪ್ತರು ಮಾತ್ರ ಇದ್ದರು.
ಇತ್ತ ಕಾಂಗ್ರೆಸ್ ಟಿಕೆಟ್ ಘೋಷಿತ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರ ತಂದೆ, ಸಚಿವ ಶಿವಾನಂದ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು, ಬಾಗಲಕೋಟೆಯಲ್ಲಿ ಏ. 13ರಂದು ನಡೆಸಲು ಉದ್ದೇಶಿಸಿದ್ದ ಮಾಧ್ಯಮಗೋಷ್ಠಿಯೂ ರದ್ದಾಗಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಘೋಷಣೆ ಬಿಕ್ಕಟ್ಟು ಮುಂದುವರೆದಿದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲೇ ಕೇಳಿರುತ್ತಿವೆ.