Advertisement

Congress: ಹೈಕಮಾಂಡ್‌ ಹೊಣೆಗೆ ಉಸ್ತುವಾರಿಗಳು ಸುಸ್ತು

01:02 AM Jan 13, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕನಿಷ್ಠ 20 ಸೀಟು ಗೆಲ್ಲಲೇಬೇಕೆಂದು ಜಿಲ್ಲಾ ಉಸ್ತು ವಾರಿ ಸಚಿವರು, ಲೋಕಸಭಾ ಸಂಯೋಜಕರಿಗೆ ಕಾಂಗ್ರೆಸ್‌ ಹೈಕಮಾಂಡ್‌ ನೀಡಿರುವ ಹೊಣೆ ಯಿಂದ ಅವರೆಲ್ಲ “ಸುಸ್ತು’ ಹೊಡೆದಿದ್ದಾರೆ.

Advertisement

ಕೆಪಿಸಿಸಿ ಮೇಲೆ ಕಾಂಗ್ರೆಸ್‌ ಹೈಕಮಾಂಡ್‌ ಅಪಾರ ವಿಶ್ವಾಸ ಮತ್ತು ನಂಬಿಕೆ ಇಟ್ಟುಕೊಂಡಿದೆ. ವಿಧಾನಸಭಾ ಚುನಾವಣೆಯಂತೆಯೇ ಲೋಕ ಸಭೆ ಚುನಾವಣೆಯಲ್ಲೂ ನಿರೀಕ್ಷಿತ ಪ್ರಚಂಡ ಜಯ ಸಿಗಬಹುದೆಂಬ ಲೆಕ್ಕಾಚಾರದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತಾರೂಢವಾಗಿದ್ದು, ಸರ ಕಾರ ತನ್ನ 7 ತಿಂಗಳ ಅವಧಿಯಲ್ಲೇ ಎಲ್ಲ 5 ಗ್ಯಾರಂಟಿಗಳನ್ನೂ ಈಡೇರಿಸಿರುವುದು ಇದಕ್ಕೆ ಕಾರಣ.

ಬೆಂಗಳೂರು ಹಾಗೂ ದಿಲ್ಲಿಯಲ್ಲಿ ಸರಣಿ ಸಭೆಗಳನ್ನು ನಡೆಸಿರುವ ಕಾಂಗ್ರೆಸ್‌ ಹೈಕಮಾಂಡ್‌ ಜಿಲ್ಲಾ ಉಸ್ತುವಾರಿ ಸಚಿವರು/ಲೋಕಸಭಾ ಚುನಾವಣೆ ಸಂಯೋಜಕರಿಗೆ ಎಲ್ಲ ರೀತಿಯ “ಹೊಣೆ’ಗಾರಿಕೆ ನಿಗದಿಪಡಿಸಿದೆ.

ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಿಂದ ಹಿಡಿದು ಚುನಾವಣೆ ಫ‌ಲಿತಾಂಶದವರೆಗೆ ಎಲ್ಲ ಹಂತಗಳಲ್ಲೂ ಅವರದ್ದೇ ಪ್ರಮುಖ ಪಾತ್ರವಿರುತ್ತದೆ. ಅವರದ್ದೇ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಯ “ಸೋಲು-ಗೆಲುವು-ಸಂಪನ್ಮೂಲ’ ಈ ಮೂರು ಸೂತ್ರಗಳನ್ನು ಸಚಿವರಿಗೆ ಸಂಪೂರ್ಣ ಮನದಟ್ಟು ಮಾಡಿಕೊಡಲಾಗಿದೆ. ಎಲ್ಲಿಯೂ ಯಾವುದಕ್ಕೂ ಕೊರತೆಯಾಗದಂತೆ ನಿರ್ವಹಿಸುವ ಜವಾಬ್ದಾರಿಯನ್ನು ಉಸ್ತುವಾರಿಗಳು ನೋಡಿಕೊಳ್ಳಬೇಕಾಗುತ್ತದೆ ಎಂದು ಹೈಕಮಾಂಡ್‌ ಸೂಚ್ಯವಾಗಿ ಹೇಳಿರುವುದರಿಂದ ಈಗ ಸಚಿವರು “ಸುಸ್ತಾಗಿ’ದ್ದಾರೆ.

ತಲೆದಂಡ “ಗ್ಯಾರಂಟಿ’
ಈ “ಟಾಸ್ಕ್’ ಈಗ ಸಚಿವರ ನಿದ್ದೆಗೆಡಿಸಿದೆ. ಈಗಿರುವ ಸಚಿವ ಸ್ಥಾನ ಉಳಿದುಕೊಳ್ಳಬೇಕಾದರೆ ತಮ್ಮ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲೇಬೇಕು, ಇಲ್ಲದಿದ್ದರೆ “ತಲೆದಂಡ’ ಗ್ಯಾರಂಟಿ ಎಂಬ ಮಾತುಗಳು ಹರಿದಾಡುತ್ತಿವೆ. ಲೋಕಸಭಾ ಚುನಾವಣೆ ಬಳಿಕ ಸಚಿವ ಸಂಪುಟ ಪುನಾರಚನೆ ಖಚಿತ ಆಗಿರುವುದರಿಂದ ಈಗ ಸಚಿವರು “ಮಾಡು ಇಲ್ಲವೇ ಮಡಿ’ ಎಂಬ ಸ್ಥಿತಿಯಲ್ಲಿದ್ದಾರೆ.

Advertisement

ಹೊಂದಾಣಿಕೆಗಿಲ್ಲ ಅವಕಾಶ
ಯಾವುದೇ ಕಾರಣಕ್ಕೂ ಸ್ಥಳೀಯವಾಗಿ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳಬಾರದು, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಒಳ್ಳೆಯ ಫ‌ಲಿತಾಂಶ ದೊರೆಯುತ್ತದೆ. ಸ್ಥಳೀಯವಾಗಿ ಪಕ್ಷದ ಶಾಸಕರು, ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂಬಿತ್ಯಾದಿ ಸಲಹೆ ನೀಡಲಾಗಿದೆ.

ಅಭ್ಯರ್ಥಿಗಳ ಕೊರತೆ ಇದ್ದಲ್ಲಿ ಸಚಿವರೇ ಚುನಾವಣೆ ಕಣಕ್ಕೆ ಧುಮುಕಬೇಕಾಗುತ್ತದೆ, ಇದಕ್ಕೆ ಈಗಿನಿಂದಲೇ ಸಿದ್ಧರಿರಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆಗೆ “ಸಂಪನ್ಮೂಲ’ದ ಸಂಪೂರ್ಣ ಜವಾಬ್ದಾರಿ ತಮ್ಮ ಮೇಲಿರುತ್ತದೆ ಎಂಬ ಸಂದೇಶ ರವಾನಿಸಿರುವುದು ಈಗ ಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಟ್ಟಾರೆ ಅಧಿಕಾರದ ಭಾಗ್ಯ ಸಿಕ್ಕ ಖುಷಿಯಲ್ಲಿದ್ದ ಸಚಿವರಿಗೆ ಈಗ ಹೊಸ ತಲೆಬೇನೆ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next