Advertisement

ಮನೆ ಮನೆಗೆ ಕಾಂಗ್ರೆಸ್‌ ಇಂದಿನಿಂದ ಆರಂಭ

10:24 AM Sep 23, 2017 | Team Udayavani |

ಬೆಂಗಳೂರು: ಬಿಜೆಪಿಯ ವಿಸ್ತಾರಕ ಕಾರ್ಯಕ್ರಮಕ್ಕೆ ಪ್ರತಿಯಾಗಿ ಆಡಳಿತ ಪಕ್ಷ “ಮನೆ ಮನೆಗೆ ಕಾಂಗ್ರೆಸ್‌” ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶನಿವಾರ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕೃತ ಚಾಲನೆ ದೊರೆಯಲಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

Advertisement

ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ 55 ಸಾವಿರ ಬೂತ್‌ಗಳಲ್ಲಿ ಬೂತ್‌ ಮಟ್ಟದ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಈ ಸಮಿತಿಗಳ ಮೂಲಕ ಪ್ರತಿ ಮನೆಗೂ ತೆರಳಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಕಾಂಗ್ರೆಸ್‌ ಮುಂದಾಗಿದೆ. ರಾಜ್ಯ ಸರ್ಕಾರದ ನಾಲ್ಕು ವರ್ಷದ ಸಾಧನೆಗಳ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಗಿದ್ದು, 1.10 ಕೋಟಿ ಕಿರು ಹೊತ್ತಿಗೆಗಳನ್ನು ಕಾರ್ಯಕರ್ತರ ಮೂಲಕ ಪ್ರತಿ ಮನೆಗೂ ತಲುಪಿಸಲು ಕಾಂಗ್ರೆಸ್‌ ವ್ಯವಸ್ಥೆ ಮಾಡಿಕೊಂಡಿದೆ.

ಕಾರ್ಯಕ್ರಮದ ಪೂರ್ವ ಸಿದ್ದತೆಗಳ ಬಗ್ಗೆ ಶುಕ್ರವಾರ  ಪರಿಶೀಲನೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಮಾತನಾಡಿ, “ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮದ ಉದ್ಘಾಟನೆ ನಂತರ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಆರಂಭಿಸಲಾಗುತ್ತದೆ. ರಾಜ್ಯದ ಪ್ರತಿ ಮನೆಗೂ ಸರ್ಕಾರದ ಸಾಧನೆಗಳನ್ನು ತಲುಪಿಸಲು ಯೋಜಿಸಲಾಗಿದೆ. ಅ.15ರ ವರೆಗೂ ಬೂತ್‌ ಮಟ್ಟದ ಕಾರ್ಯಕರ್ತರು ಮನೆ ಮನೆಗೂ ತೆರಳಿ ಸರ್ಕಾರದ ಸಾಧನೆ ಜೊತೆಗೆ ಬಿಜೆಪಿ ಸರ್ಕಾರದ ವೈಫ‌ಲ್ಯಗಳನ್ನೂ ಜನರಿಗೆ ತಲುಪಿಸಲಿದ್ದಾರೆ’ ಎಂದು ಹೇಳಿದರು. ಕಾಂಗ್ರೆಸ್‌ ಈಗಾಗಲೇ 2018 ರ ಚುನಾವಣೆಗೆ ರಣ ಕಹಳೆ ಮೊಳಗಿಸಿದೆ. ಕೂಡಲಸಂಗಮ, ರಾಯಚೂರು ಸಮಾವೇಶಗಳನ್ನು ನೋಡಿ ಬಿಜೆಪಿಯವರು ತತ್ತರಿಸಿ ಹೋಗಿದ್ದಾರೆ ಎಂದರು. ಇದೇ ವೇಳೆ, ಮಹದೇವಪುರ ಕ್ಷೇತ್ರದಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, 2013ರಲ್ಲಿ ಅಭ್ಯರ್ಥಿಯಾಗಿದ್ದ ಎ.ಸಿ.ಶ್ರೀನಿವಾಸ್‌ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next