ಬೆಂಗಳೂರು: ಮೇಕೆದಾಟು ಹೆಸರಲ್ಲಿ ನಡೆಸಿರುವ ಪಾದಯಾತ್ರೆಯು ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕಾಗಿ ನಡೆಯುತ್ತಿರುವ ರಾಜಕೀಯ ಮೇಲಾಟದ ಫಲ ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ರಾಜ್ಯದ ಜನರ ಕುರಿತು ಕಾಳಜಿಯೇ ಇಲ್ಲ. ಅವರ ಯಾತ್ರೆಯು ಯೋಜನೆ ಅನುಷ್ಠಾನಕ್ಕೆ ಮಾರಕವಾಗಲಿದೆ ಎಂದು ದೂರಿದರು.
ಕಾಂಗ್ರೆಸ್ ನಾಯಕರ ಪಾದಯಾತ್ರೆ ಯಾವ ಪುರುಷಾರ್ಥಕ್ಕೆ ಎನ್ನುವುದೇ ಅರ್ಥವಾಗುವದಿಲ್ಲ. ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ನಾಯಕತ್ವದ ಮೇಲಾಟ ನಡೆಯುತ್ತಿದೆ. ಕಾಂಗ್ರೆಸ್ ಒಳಜಗಳದಿಂದಾಗಿ ಮೇಕೆದಾಟು ಯೋಜನೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದರು.
ಮೇಕೆದಾಟು ಯೋಜನೆ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿರುವಾಗ ಇಂತಹ ಪ್ರಹಸನ ಮಾಡುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದರು.
ಜಿಲ್ಲಾಡಳಿತದ ಎಚ್ಚರಿಕೆಯ ಹೊರತಾಗಿಯೂ ನೀವು ಮಾಡಿದ ಪಾದಯಾತ್ರೆಯಿಂದ ಏನು ಸಾಧಿಸಿದ್ದೀರಿ. ಕೋವಿಡ್ ಪ್ರಕರಣ ಹೆಚ್ಚಳವಾಗಿದ್ದೇ ಸಾಧನೆ. ನಿಮ್ಮ ನಾಯಕರಾದ ಪ್ರಿಯಾಂಕ್ ಖರ್ಗೆ, ರೇವಣ್ಣ, ಸಿ. ಎಂ ಇಬ್ರಾಹಿಂ ಸಹಿತ ಅನೇಕರು ಸೋಂಕಿಗೆ ತುತ್ತಾಗಿದ್ದಾರೆ. ಟೆಸ್ಟ್ ಮಾಡಿಸಿದರೆ ಪಾದಯಾತ್ರೆಯಲ್ಲಿ ಭಾಗವಹಿಸಿದವರು ಮತ್ತು ಅವರ ಕುಟುಂಬದ ಸುಮಾರು 6 ಸಾವಿರ ಜನರಿಗೆ ಕೊರೋನಾ ಸೋಂಕು ಬಂದಿರಬಹುದು. ನಿಮ್ಮ ಏರ್ ಕಂಡಿಷನ್ ಯಾತ್ರೆ ಮತ್ತೆ ಮುಂದುವರಿಸಬೇಡಿ ಎಂದು ಲೇವಡಿ ಮಾಡಿದರು.
ಯಾವುದೇ ಒಂದು ಅಂತರಾಜ್ಯ ನದಿ ನೀರಿನ ವಿವಾದ ರಾಜಕೀಯ ಮೇಲಾಟದಿಂದ ಬಗೆಹರಿದ ಉದಾಹರಣೆ ಇಲ್ಲ. ಅದಕ್ಕೊಂದು ವ್ಯವಸ್ಥೆ, ನೀತಿ ನಿಯಮ ಇದೆ ಎಂದು ಹೇಳಿದರು.