Advertisement

Congress High Command: ಸಾಕು, ನಿಲ್ಲಿಸಿ; ಸಿದ್ದು ಬಣಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ತರಾಟೆ

10:32 PM Jun 27, 2024 | Team Udayavani |

ಬೆಂಗಳೂರು: ಸಿಎಂ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಣಗಳ ನಡುವೆ ನಿತ್ಯ ನಡೆಯುತ್ತಿರುವ ಹೇಳಿಕೆಗಳಿಂದ ರಾಜ್ಯ ಸರ್ಕಾರ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್‌ ಹೈಕಮಾಂಡ್‌ ಬಹಿರಂಗ ಹೇಳಿಕೆ ನೀಡದಂತೆ ಉಭಯ ಬಣಗಳಿಗೆ ತಾಕೀತು ಮಾಡಿದೆ.

Advertisement

ಕಳೆದ ಎರಡು ವಾರಗಳಿಂದ ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತೀವ್ರ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸಿರುವ ಹೈಕಮಾಂಡ್‌, ಪಕ್ಷದ ಆಂತರಿಕ ವಿದ್ಯಮಾನಗಳ ಬಗ್ಗೆ ಸಾರ್ವಜನಿಕವಾಗಿ ಸಚಿವರು, ಶಾಸಕರು ಹೇಳಿಕೆ ನೀಡುವುದನ್ನು ಪಕ್ಷ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಪಕ್ಷದ ವೇದಿಕೆಯಲ್ಲಿ ಚರ್ಚಿಸಬಹುದಾದ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಸೂಕ್ತವಲ್ಲ, ಸಮಂಜಸವೂ ಅಲ್ಲ. ಇದರಿಂದ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತಿದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ರೀತಿ ಉಭಯ ಬಣಗಳು ವರ್ತಿಸುತ್ತಿರುವುದು ಸರಿಯಲ್ಲ. ಈ ವರ್ತನೆಯನ್ನು ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಹಿಂದೆ ಹಲವು ಸಲ ಇದೇ ವಿಷಯಗಳ ಬಗ್ಗೆ ಬಹಿರಂಗ ಹೇಳಿಕೆ ನೀಡಿದಾಗಲೂ ಹೈಕಮಾಂಡ್‌ ನಾಯಕರು ಎಚ್ಚರಿಕೆ ನೀಡಿದ್ದರು. ಆದರೆ, ತರುವಾಯವೂ ಹಲವರು ಅದರಲ್ಲೂ ವಿಶೇಷವಾಗಿ ಹಿರಿಯ ನಾಯಕರೇ ಪಕ್ಷದ ಶಿಸ್ತನ್ನು ಉಲ್ಲಂ ಸಿದ್ದರು. ಮುಂದೆ ಇದು ಸರಿ ಹೋಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಈಗ ದಿಢೀರನೇ ಅನಗತ್ಯವಾಗಿರುವ ವಿಷಯಗಳನ್ನು ಪದೇ ಪದೆ ಕೆದಕುವ ಮೂಲಕ ಹೇಳಿಕೆ- ಪ್ರತಿ ಹೇಳಿಕೆ ನೀಡಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಲಾಗುತ್ತಿದೆ. ಇದಕ್ಕೆ ತಕ್ಷಣವೇ ಬ್ರೇಕ್‌ ಹಾಕಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಣದೀಪ್‌ ಸಿಂಗ್‌ ಸುಜೇìವಾಲ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಬಣಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಮುಲಾಜಿಲ್ಲದೆ ಕ್ರಮದ ಎಚ್ಚರಿಕೆ:

ಸರ್ಕಾರ ಇಲ್ಲವೇ ಪಕ್ಷದ ವಿದ್ಯಮಾನಗಳ ಬಗ್ಗೆ ಯಾರು ಏನೇ ಹೇಳಬೇಕಿದ್ದರೂ ದಿಲ್ಲಿಗೆ ನೇರವಾಗಿ ಬಂದು ಪಕ್ಷದ ಚೌಕಟ್ಟಿನೊಳಗೆ ಚರ್ಚಿಸಬೇಕೇ ಹೊರತು ಬಹಿರಂಗ ಹೇಳಿಕೆ ನೀಡುವುದಲ್ಲ. ಇದು ಇನ್ನು ಮುಂದೆಯೂ ಮುಂದುವರಿದರೆ ಎಷ್ಟೇ ದೊಡ್ಡವರಾಗಿದ್ದರೂ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next