Advertisement

ಹಿಂದೂಗಳಿಗೆ ಹೆದರಿ ಓಡಿಹೋದ ಕಾಂಗ್ರೆಸ್‌

09:46 AM Apr 05, 2019 | mahesh |

ಹೊಸದಿಲ್ಲಿ: “ಕಾಂಗ್ರೆಸ್‌ ಶಾಂತಿ ಪ್ರಿಯ ಹಿಂದೂಗಳಿಗೆ “ಉಗ್ರವಾದಿಗಳು’ ಎಂಬ ಹಣೆಪಟ್ಟಿ ಕಟ್ಟಿತು. ಈಗ ಹಿಂದೂಗಳ ಬಾಹುಳ್ಯವಿರುವ ಪ್ರದೇಶಗಳಲ್ಲಿ ಕಣಕ್ಕಿಳಿಯಲು ಆ ಪಕ್ಷದ ನಾಯಕರಿಗೆ ಭಯವಾಗಿ, ಅಲ್ಲಿಂದ ಓಡಿಹೋಗಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

Advertisement

ಅಮೇಠಿ ಜತೆಗೆ ಕೇರಳದ ವಯನಾಡ್‌ನಿಂದಲೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಸ್ಪರ್ಧಿಸುತ್ತಿರುವ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿ ಪ್ರಧಾನಿ ಮೋದಿ ಈ ಮಾತುಗಳನ್ನಾಡಿದ್ದಾರೆ. ಮಹಾರಾಷ್ಟ್ರದ ವಾರ್ಧಾದಲ್ಲಿ ಸೋಮವಾರ ರ್ಯಾಲಿ ನಡೆಸಿ ಮಾತನಾಡಿದ ಪ್ರಧಾನಿ ಮೋದಿ, “ಹಿಂದೂ ಉಗ್ರವಾದ ಎಂಬ ಪದ ಬಳಕೆ ಮಾಡುವ ಮೂಲಕ ಕಾಂಗ್ರೆಸ್‌, ದೇಶದ ಕೋಟ್ಯಂತರ ಹಿಂದೂಗಳ ಹೆಸರಿಗೆ ಕಳಂಕ ತಂದಿದೆ. ಸಾವಿರಾರು ವರ್ಷಗಳ ಇತಿಹಾಸದಲ್ಲೇ ದೇಶದ ಯಾವೊಬ್ಬ ಹಿಂದೂವಾದರೂ ಭಯೋತ್ಪಾದನೆಯಲ್ಲಿ ಪಾಲ್ಗೊಂಡಿದ್ದಿದೆಯೇ’ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಹಿಂದೂಗಳು ಈಗ ಎಚ್ಚೆತ್ತುಕೊಂಡಿದ್ದಾರೆ. ಪ್ರತಿಪಕ್ಷಗಳಿಗೆ ತಕ್ಕ ಶಿಕ್ಷೆ ನೀಡಲು ದೇಶ ನಿರ್ಧರಿಸಿದೆ ಎಂದೂ ಮೋದಿ ಹೇಳಿದ್ದಾರೆ.

ತೆರಿಗೆ ಏರಿಸಿಲ್ಲ: ಇದೇ ವೇಳೆ, ಎನ್‌ಡಿಎ ಸರಕಾರವು ಕಳೆದ 5 ವರ್ಷಗಳಲ್ಲಿ ತೆರಿಗೆಯನ್ನೇ ಏರಿಸಿಲ್ಲ. ಹೀಗಿದ್ದರೂ, ದೇಶದ ಅಭಿವೃದ್ಧಿಯಲ್ಲಿ ಕುಂಠಿತವೂ ಆಗಿಲ್ಲ ಎಂದೂ ಮೋದಿ ಹೇಳಿದ್ದಾರೆ.

ಪವಾರ್‌ ವಿರುದ್ಧ ಕಿಡಿ: ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೆಸರು ಪ್ರಸ್ತಾಪಿಸಿದ ಮೋದಿ, “ಅವರ ಪಕ್ಷದಲ್ಲೇ ಒಳಜಗಳವಿದೆ. ಪಕ್ಷವು ಅವರ ನಿಯಂತ್ರಣ ತಪ್ಪುತ್ತಿದೆ. ಗಾಳಿ ಬೇರೆ ಕಡೆ ಬೀಸುತ್ತಿರುವುದು ಅವರಿಗೂ ಗೊತ್ತಾಗಿದೆ’ ಎಂದು ಹೇಳಿದ್ದಾರೆ. ಇದಕ್ಕೆ ಎನ್‌ಸಿಪಿ ತಿರುಗೇಟು ನೀಡಿದ್ದು, “ಪವಾರ್‌ ಅವರು ಈಗಲೂ ಪಕ್ಷದ ಅಧ್ಯಕ್ಷರಾಗಿದ್ದಾರೆ. ನಿಮ್ಮ ಪಕ್ಷದಲ್ಲಿ ಅಡ್ವಾಣಿಯವರನ್ನು ನೀವು ಹೇಗೆ ನಡೆಸಿಕೊಂಡಿರಿ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಹೇಳಿದೆ.

ದೇಶದ ಪ್ರಧಾನಿಯಿಂದ ಇಂಥ ಮಾತುಗಳನ್ನು ಕೇಳುತ್ತಿರುವುದು ದುರದೃಷ್ಟಕರ. ದೇಶದ ಜನರನ್ನು ಧರ್ಮ ಹಾಗೂ ಜಾತಿಯ ಆಧಾರದಲ್ಲಿ ವಿಭಜಿಸುತ್ತಿರುವ ಪ್ರಧಾನಿ ಮೋದಿ ಅವರು, ದೇಶದ ಪ್ರಜಾಸತ್ತೆಗೇ ಅವಮಾನ ಮಾಡಿದ್ದಾರೆ.
ಮನೀಷ್‌ ತಿವಾರಿ, ಕಾಂಗ್ರೆಸ್‌ ವಕ್ತಾರ

Advertisement

“ಮೋದಿಯ ಸೇನೆ’ ಎಂದ ಸಿಎಂ ಯೋಗಿ; ವರದಿ ಕೇಳಿದ ಚುನಾವಣಾ ಅಧಿಕಾರಿ
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ಗಾಜಿಯಾಬಾದ್‌ ರ್ಯಾಲಿ ವೇಳೆ, ಭಾರತೀಯ ಸೇನೆಯನ್ನು “ಮೋದಿಯವರ ಸೇನೆ’ ಎಂದು ಕರೆಯುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಕಾಂಗ್ರೆಸ್‌ ನಾಯಕರು ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸಿದರೆ, ಮೋದಿ ಸೇನೆಯು ಉಗ್ರರಿಗೆ ಬುಲೆಟ್‌ ಮತ್ತು ಬಾಂಬ್‌ ತಿನ್ನಿಸುತ್ತದೆ ಎಂದು ಯೋಗಿ ಹೇಳಿದ್ದಾರೆ.

ಈ ಮೂಲಕ ದೇಶದ ಸೇನೆಯನ್ನು ರಾಜಕೀಯಕ್ಕೆ ಎಳೆದು ತಂದಿದ್ದಾರೆ. ಯೋಗಿಯವರ ಈ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ದೇಶದ ಆಸ್ತಿಯಾಗಿರುವ ಸೇನೆಯನ್ನು ಮೋದಿ ಸೇನೆ ಎನ್ನುವ ಮೂಲಕ ಯೋಧರಿಗೆ ಅವಮಾನ ಮಾಡಿದ್ದಾರೆ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ಸಿಪಿಐ ನಾಯಕ ಡಿ.ರಾಜಾ ಕೂಡ ಪ್ರತಿಕ್ರಿಯಿಸಿದ್ದು, ಇದೊಂದು ಖಂಡನೀಯ ಹೇಳಿಕೆ. ಯೋಗಿ ಆದಿತ್ಯನಾಥ್‌ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ದೇಶದ ರಕ್ಷಣಾ ಪಡೆಯು ಒಂದು ರಾಜಕೀಯ ಪಕ್ಷಕ್ಕೆ ಸೇರಿದೆ ಎಂದು ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಯೋಗಿ ಹೇಳಿಕೆ ವಿವಾದ ಮೂಡಿಸಿದ ಹಿನ್ನೆಲೆಯಲ್ಲಿ, ಈ ಕುರಿತು ವರದಿ ನೀಡುವಂತೆ ಸೂಚಿಸಿ ಯೋಗಿದೆ ಉತ್ತರಪ್ರದೇಶದ ಚುನಾವಣಾ ಅಧಿಕಾರಿ ನೋಟಿಸ್‌ ಜಾರಿ ಮಾಡಿದ್ದಾರೆ.

ಆರ್‌ಜೆಡಿಗೆ ಲಾಲು ಪುತ್ರನಿಂದಲೇ ಶಾಕ್‌
ಲಾಲು ಪ್ರಸಾದ್‌ ಯಾದವ್‌ ನೇತೃತ್ವದ ಆರ್‌ಜೆಡಿಗೆ ಹೊಸ ತಲೆನೋವು ಶುರುವಾಗಿದೆ. ಕೆಲವು ದಿನಗಳಿಂದೀಚೆಗೆ ಬೇರೆ ಬೇರೆ ರೂಪದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದ ಲಾಲು ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಸೋಮವಾರ ಪಕ್ಷಕ್ಕೆ ದೊಡ್ಡ ಆಘಾತವನ್ನೇ ನೀಡಿದ್ದಾರೆ. ತಾವು “ಲಾಲು-ರಾಬ್ರಿ ಮೋರ್ಚಾ’ ಎಂಬ ಹೊಸ ಸಂಘಟನೆ ಹುಟ್ಟುಹಾಕಿದ್ದು, ಈ ಲೋಕಸಭೆ ಚುನಾವಣೆಯಲ್ಲಿ 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ಸೋಮವಾರ ಏಕಾಏಕಿ ತೇಜ್‌ ಪ್ರತಾಪ್‌ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಪರಿತ್ಯಕ್ತ ಪತ್ನಿಯ ತಂದೆ ಕಣಕ್ಕಿಳಿದಿರುವ ಸಾರನ್‌ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ತಾಯಿ ರಾಬ್ರಿ ದೇವಿಗೆ ತೇಜ್‌ ಪ್ರತಾಪ್‌ ಆಹ್ವಾನ ನೀಡಿದ್ದಾರೆ. ಒಂದು ವೇಳೆ, ತಮ್ಮ ಆಹ್ವಾನವನ್ನು ತಿರಸ್ಕರಿಸಿದ್ದೇ ಆದಲ್ಲಿ ತಾವೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ. ಇದೆಲ್ಲದರ ನಡುವೆ, ತಮ್ಮ ಸಂಘಟನೆಯು ಆರ್‌ಜೆಡಿಯಿಂದ ಹೊರತಾಗಿಲ್ಲ ಎಂದೂ ಹೇಳಿರುವ ಅವರು, ಸಂಘಟನೆಯ ಬ್ಯಾನರ್‌ನಲ್ಲಿ ತಮ್ಮ ಅಪ್ಪ-ಅಮ್ಮ ಹಾಗೂ ಸಹೋದರ ತೇಜಸ್ವಿ ಯಾದವ್‌ ಅವರ ಫೋಟೋಗಳನ್ನೂ ಹಾಕಿರುವುದಾಗಿ ತೋರಿಸಿದ್ದಾರೆ. ತೇಜ್‌ಪ್ರತಾಪ್‌ರ ಈ ನಡೆ ಆರ್‌ಜೆಡಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸುಪ್ರೀಂಗೆ ಹಾರ್ದಿಕ್‌
2015ರ ಗಲಭೆ ಪ್ರಕರಣದಲ್ಲಿ ತಮ್ಮ ವಿರುದ್ಧದ ತೀರ್ಪಿಗೆ ತಡೆ ತರಲು ಗುಜರಾತ್‌ ಹೈಕೋರ್ಟ್‌ ನಿರಾಕರಿಸಿರುವುದನ್ನು ಪ್ರಶ್ನಿಸಿ ಮೀಸಲು ಹೋರಾಟಗಾರ ಹಾರ್ದಿಕ್‌ ಪಟೇಲ್‌ ಸೋಮವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಮಂಗಳವಾರ ಈ ಅರ್ಜಿಯನ್ನು ತ್ವರಿತ ವಿಚಾರಣೆ ನಡೆಸುವಂತೆ ವಕೀಲರು ಮನವಿ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್‌ ಟಿಕೆಟ್‌ನಲ್ಲಿ ಹಾರ್ದಿಕ್‌ ಜಾಮ್‌ನಗರದಿಂದ ಕಣಕ್ಕಿಳಿಯಲು ಬಯಸುತ್ತಿದ್ದು, ಎ.4ರೊಳಗಾಗಿ ನಾಮಪತ್ರ ಸಲ್ಲಿಸಬೇಕಾಗಿದೆ. ಅದಕ್ಕೆ ಮುನ್ನವೇ ಸುಪ್ರೀಂ ಕೋರ್ಟ್‌ ಹಾರ್ದಿಕ್‌ ಮನವಿ ಯನ್ನು ಪುರಸ್ಕರಿಸಿದರೆ, ಅವರಿಗೆ ಸ್ಪರ್ಧಿಸಲು ಯಾವುದೇ ಸಮಸ್ಯೆ ಇರುವುದಿಲ್ಲ. ಇಲ್ಲದಿದ್ದರೆ, ಹಾರ್ದಿಕ್‌ ಚುನಾವಣಾ ರಾಜಕೀಯದ ಕನಸು ನುಚ್ಚು ನೂರಾಗಲಿದೆ.

ತಲಾಲ ಚುನಾವಣೆಗೆ ಸುಪ್ರೀಂ ಕೋರ್ಟ್‌ ತಡೆ
ಗುಜರಾತ್‌ನ ತಲಾಲ ವಿಧಾನಸಭೆ ಕ್ಷೇತ್ರದ ಶಾಸಕ ಬಿ.ಡಿ.ಬರಾದ್‌ರನ್ನು ಅನರ್ಹಗೊಳಿಸಿದ್ದರಿಂದ ಖಾಲಿಯಾಗಿರುವ ಸ್ಥಾನಕ್ಕೆ ಚುನಾವಣೆ ಘೋಷಿಸಿದ ಚುನಾವಣಾ ಆಯೋಗದ ಕ್ರಮಕ್ಕೆ ಸುಪ್ರೀಂಕೋರ್ಟ್‌ ತಡೆ ನೀಡಿದೆ. ಲೋಕಸಭೆ ಚುನಾವ ಣೆಯೊಂದಿಗೇ ಈ ಕ್ಷೇತ್ರದ ಚುನಾವಣೆಯೂ ನಡೆಯಲಿತ್ತು. ಪ್ರಕರಣವೊಂದರಲ್ಲಿ ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ 5 ರಂದು ವಿಧಾನಸಭೆ ಸ್ಪೀಕರ್‌, ಬರಾದ್‌ರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಇದರ ವಿರುದ್ಧ ಕೋರ್ಟ್‌ ಮೊರೆ ಹೋಗಿದ್ದ ಬರಾದ್‌, ತಡೆ ಆದೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚುನಾವಣಾ ಬಾಂಡ್‌ ಮಾರಾಟ ಏರಿಕೆ
ಲೋಕಸಭೆ ಚುನಾವನೆ ಸಮೀಪಿಸುತ್ತಿದ್ದಂತೆ ಚುನಾವಣೆ ಬಾಂಡ್‌ಗಳ ಮಾರಾಟವೂ ಹೆಚ್ಚಳ ಕಂಡಿದೆ. ಎಸ್‌ಬಿಐ ಮಾರಾಟ ಮಾಡುವ ಈ ಚುನಾವಣಾ ಬಾಂಡ್‌ಗಳಿಂದ ಪ್ರಸ್ತಕ್ತ ವರ್ಷ 1700 ಕೋಟಿ ರೂ.ಸಂಗ್ರಹವಾಗಿದೆ. 2018ರಲ್ಲಿ ಮಾರ್ಚ್‌ ನಿಂದ ನವೆಂಬರ್‌ ವರೆಗೆ 1056 ಕೋಟಿ ರೂ. ರಾಜಕೀಯ ಪಕ್ಷಗಳಿಗೆ ಸಂದಾಯ ವಾಗಿದ್ದರೆ, ಈ ವರ್ಷ ಜನವರಿಯಿಂದ ಮಾರ್ಚ್‌ವರೆಗಿನ ಅವಧಿಯಲ್ಲೇ ಈ ಮೊತ್ತ 1716 ಕೋಟಿ ರೂ. ಆಗಿದೆ. ಈ ವರ್ಷ ಚುನಾವಣಾ ಬಾಂಡ್‌ಗಳ ಮಾರಾಟ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 62 ರಷ್ಟು ಹೆಚ್ಚಿರುವುದು ಇದರಿಂದ ತಿಳಿದುಬಂದಿದೆ. ಈ ಪೈಕಿ ಮುಂಬೈನಲ್ಲಿ ಅತ ಹೆಚ್ಚು ಮಾರಾಟವಾಗಿದ್ದು, 495.60 ಕೋಟಿ ರೂ. ಸಂಗ್ರಹವಾಗಿದೆ.

9 ಕೋಟಿ ಪತ್ತೆ!: ತಮಿಳುನಾಡಿನ ವೆಲ್ಲೂರಿನ ಸಿಮೆಂಟ್‌ ಗೋದಾಮೊಂದರಲ್ಲಿ ಪೆಟ್ಟಿಗೆಗಳು ಹಾಗೂ ಚೀಲಗಳಲ್ಲಿ ತುಂಬಿಸಿಡಲಾಗಿದ್ದ 9 ಕೋಟಿ ರೂ. ಮೊತ್ತದ ನಗದನ್ನು ಐಟಿ ವಶಪಡಿಸಿಕೊಂಡಿದೆ. ಈ ಗೋದಾಮು ಡಿಎಂಕೆ ನಾಯಕರೊಬ್ಬರ ಆಪ್ತರಿಗೆ ಸೇರಿದ್ದು ಎನ್ನಲಾಗಿದೆ.

ಮೋದಿಗೆ “ಕನ್ನಡಿ’ ಗಿಫ್ಟ್!
ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ಸೋಮವಾರ ಪ್ರಧಾನಿ ಮೋದಿಯವರಿಗೆ “ಕನ್ನಡಿ’ಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದನ್ನು ಪಾರ್ಸೆಲ್‌ ಕಳುಹಿಸಿದ ಬಳಿಕ ಮಾತನಾಡಿದ ಬಘೇಲ್‌, “ಮೋದಿಯವರೇ, ಈ ಕನ್ನಡಿಯನ್ನು ಲೋಕಕಲ್ಯಾಣ ಮಾರ್ಗದಲ್ಲಿರುವ ನಿಮ್ಮ ನಿವಾಸದಲ್ಲಿ ಕಣ್ಣಿಗೆ ಕಾಣುವಂತೆ ಇಟ್ಟುಕೊಳ್ಳಿ. ಅದರಲ್ಲಿ ಪ್ರತಿದಿನ ನಿಮ್ಮ ನಿಜವಾದ ಮುಖ ನೋಡಿಕೊಳ್ಳಿ ಎಂದಿದ್ದಾರೆ.

ರಾಹುಲ್‌ ಬಾಬಾರ ಪಕ್ಷವು ಹಿಂದೂ ಸಮುದಾಯಕ್ಕೆ ಭಯೋತ್ಪಾದನೆಯ ಲಿಂಕ್‌ ನೀಡಲು ಪ್ರಯತ್ನಿಸಿತು. ಜಗತ್ತಿನಾದ್ಯಂತದ ಹಿಂದೂಗಳಿಗೆ ಅವಮಾನ ಮಾಡುವ ತಂತ್ರವಿದು. ಇವರಿಗೆ ದೇಶದ ಭದ್ರತೆಯ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ.
ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ಅಮಿತ್‌ ಶಾ ಅಫಿಡವಿಟ್‌ನಲ್ಲಿ 66.5 ಲಕ್ಷ ರೂ. ಬೆಲೆಬಾಳುವ ಸೈಟ್‌ ಅನ್ನು 25 ಲಕ್ಷ ರೂ. ಎಂದು ನಮೂದಿಸಿದ್ದಾರೆ. ಇದೊಂದು ಗಂಭೀರ ಪ್ರಕರಣ. ಸುಳ್ಳು ಅಫಿದವಿತ್‌ ಸಲ್ಲಿಸಿರುವ ಅವರ ವಿರುದ್ಧ ಆಯೋಗ ಕ್ರಮ ಕೈಗೊಳ್ಳಬೇಕು.
ಮನೀಷ್‌ ತಿವಾರಿ, ಕಾಂಗ್ರೆಸ್‌ ವಕ್ತಾರ

ತಮ್ಮ ತಂದೆ, ಚಿಕ್ಕಪ್ಪನಿಗೆ ವಿಧೇಯನಾಗಿರಲು ಸಾಧ್ಯವಿಲ್ಲದಂಥ ವ್ಯಕ್ತಿ ಮೈತ್ರಿ ಪಕ್ಷಗಳಿಗೆ ವಿಧೇಯನಾಗಿರಲು ಹೇಗೆ ಸಾಧ್ಯ? ಅಖೀಲೇಶ್‌ ಯಾದವ್‌ಗೆ ತಮ್ಮನ್ನೂ ಬಲಪಡಿಸಿಕೊಳ್ಳಲು ಆಗುವುದಿಲ್ಲ. ಅತ್ತ ಮಾಯಾವತಿಗೂ ಬಲ ಸಿಗುವುದಿಲ್ಲ.
ಕೇಶವ್‌ ಮೌರ್ಯ, ಉ.ಪ್ರ. ಡಿಸಿಎಂ

ತಮ್ಮ ತಂದೆ, ಚಿಕ್ಕಪ್ಪನಿಗೆ ವಿಧೇಯನಾಗಿರಲು ಸಾಧ್ಯವಿಲ್ಲದಂಥ ವ್ಯಕ್ತಿ ಮೈತ್ರಿ ಪಕ್ಷಗಳಿಗೆ ವಿಧೇಯನಾಗಿರಲು ಹೇಗೆ ಸಾಧ್ಯ? ಅಖೀಲೇಶ್‌ ಯಾದವ್‌ಗೆ ತಮ್ಮನ್ನೂ ಬಲಪಡಿಸಿಕೊಳ್ಳಲು ಆಗುವುದಿಲ್ಲ. ಅತ್ತ ಮಾಯಾವತಿಗೂ ಬಲ ಸಿಗುವುದಿಲ್ಲ.
ಕೇಶವ್‌ ಮೌರ್ಯ, ಉ.ಪ್ರ. ಡಿಸಿಎಂ

ಬಿಹಾರದ ಜನತೆ ಎನ್‌ಡಿಎ ಸರಕಾರ ದಿಂದ ಎದುರಿಸಿದ “ಅನ್ಯಾಯ’ಗಳಿಗೆ ಕಾಂಗ್ರೆಸ್‌ ಘೋಷಿಸಿರುವ “ನ್ಯಾಯ್‌’ ಯೋಜನೆಯು ನ್ಯಾಯ ಒದಗಿಸಲಿದೆ. ಬಡತನ ನಿವಾರಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವವಾದದ್ದು.
ತೇಜಸ್ವಿ ಯಾದವ್‌, ಆರ್‌ಜೆಡಿ ನಾಯಕ

ಭಾರತವು ಜಗತ್ತಿನ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದು. ಸರಕಾರದ ಯಾವುದೇ ಸಚಿವನ ಮೇಲೂ ಭ್ರಷ್ಟಾಚಾರ ಆರೋಪವಿಲ್ಲ. ಆಡಳಿತ ಹೇಗೆ ನಡೆಸಬೇಕು ಎಂಬುದನ್ನು ಬಿಜೆಪಿ ನೋಡಿ ಕಾಂಗ್ರೆಸ್‌ ಕಲಿಯಲಿ.
ರಾಜನಾಥ್‌ ಸಿಂಗ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next