ರಾಂಪುರ: ಬಿಜೆಪಿ ಈ ದೇಶದಲ್ಲಿ ಸರ್ವಧರ್ಮ ಸಮಾನತೆ ಸಾರುತ್ತಿದೆ. ಜಾತಿ ಭೂತವನ್ನು ಬಿತ್ತಿ ಬೆಳಿಸಿದವರು ಕಾಂಗ್ರೆಸ್ಸಿಗರೇ ಹೊರತು ಬೇರೆ ಯಾರೂ ಅಲ್ಲ. ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸುವ ಮೂಲಕ ಪಿ.ಸಿ ಗದ್ದಿಗೌಡರ ಅವರಿಗೆ ಮತ ನೀಡಿ ಮೋದಿಯನ್ನು ಮತ್ತೇ ಪ್ರಧಾನಮಂತ್ರಿ ಮಾಡಲು ಅವಕಾಶ ನೀಡಬೇಕು ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಮನವಿ ಮಾಡಿದರು.
ಬೇವೂರ ಮತ್ತು ರಾಂಪುರನಲ್ಲಿ ಹಮ್ಮಿಕೊಂಡಿದ್ದ ಬಾಗಲಕೋಟೆ ಲೋಕಸಭಾ ಚುನಾವಣೆ ಅಭ್ಯರ್ಥಿ ಪಿ.ಸಿ ಗದ್ದಿಗೌಡರ ಪರ ಮತಯಾಚಿಸಿ ಅವರು ಮಾತನಾಡಿದರು.
ಹಿಂದೂ ಧರ್ಮದ ಉಳಿವಿಗೆ ಹಾಗೂ ದೇಶ ರಕ್ಷಣೆಯ ಹಿತದೃಷ್ಟಿಯಿಂದ ಬಿಜೆಪಿಗೆ ಮತ ನೀಡಿ. ರಾಷ್ಟ್ರದ್ರೋಹ ಮಾಡುವವರಿಗೆ ಪಾಠ ಕಲಿಸಬೇಕು. ಕೇವಲ ಕಾಂಗ್ರೆಸ್ ಪಕ್ಷವೇ ಎಲ್ಲವನ್ನು ಮಾಡಿದ್ದು ಎಂದು ಹೇಳಿಕೊಂಡು ತಿರುಗಾಡುತ್ತಿದೆ. ಕಳೆದ ಐದು ವರ್ಷದಲ್ಲಿ ಬಿಜೆಪಿ ದೇಶದಲ್ಲಿ ಏನೇನು ಮಾಡಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಸಿದ್ದರಾಮಯ್ಯ ಕುರುಬರ ಸಮಾಜದ ನಾಯಕನೆಂದು ಹೇಳಿಕೊಳ್ಳುತ್ತಾರೆ. ಅವರನ್ನು ತೆಲೆಯ ಮೇಲೆ ಹೊತ್ತುಕೊಂಡು ತಿರುಗುತ್ತಿರುವ ಜನರಿಗೆ ಅವರಿಂದ ಏನಾದರೂ ಸಹಾಯವಾಗಿದೆ ಎಂಬುದನ್ನು ಸಮಾಜದವರು ಅರಿತುಕೊಳ್ಳಬೇಕು. ಮತ ಬದಲಾದರೆ ರಾಜ್ಯದಲ್ಲಿ ಕಳ್ಳರು, ಸುಳ್ಳರು, ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಶಾಸಕ ಡಾ| ವೀರಣ್ಣ ಚರಂತಿಮಠ ಮಾತನಾಡಿ, ದೇಶದಲ್ಲಿನ ಸುರಕ್ಷತೆ, ಅಭಿವೃದ್ಧಿಗೆ ಹಾಗೂ ಪರಿಣಾಮಕಾರಿ ಆರ್ಥಿಕ ನೀತಿ ಸದೃಢಗೊಳಿಸಲು, ಮತ್ತೂಮ್ಮೆ ನರೇಂದ್ರ ಮೋದಿ ಅವರೇ ಪ್ರಧಾನಮಂತ್ರಿಯಾಗುವ ಅನಿವಾರ್ಯತೆಯಿದೆ. ಕಾಲು ಕೆದರಿ ಜಗಳಕ್ಕೆ ಬರುವ ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು ಅದು ಮೋದಿಯಿಂದಲೇ ಮಾತ್ರ ಸಾಧ್ಯ. ಬಿಜೆಪಿ ಅಭ್ಯರ್ಥಿ ಪಿ.ಸಿ ಗದ್ದಿಗೌಡರ ಅವರಿಗೆ ಮತ್ತೂಮ್ಮೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಪಿ.ಸಿ ಗದ್ದಿಗೌಡರ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಕಾಮಗಾರಿಗಳು ನಡೆದಿವೆ. ರೇಲ್ವೆ ಕಾಮಗಾರಿ, ರಾಜ್ಯ ಹೆದ್ದಾರಿ, ಅಲ್ಲದೇ ಪ್ರವಾಸೋಧ್ಯಮಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು. ಮಾಜಿ ಶಾಸಕ ಪಿ.ಎಚ್. ಪೂಜಾರ, ಜಿ.ಎನ್ ಪಾಟೀಲ, ನಾರಾಯಣ ಸಾ ಬಾಂಢಗೆ, ರಾಜು ಮುದೇನೂರ, ಗುರುರಾಜ ಅನಗವಾಡಿ, ಎಸ್.ಎಂ ಹರಗಬಲ್ಲ ಉಪಸ್ಥಿತರಿದ್ದರು.