ಬಳ್ಳಾರಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಪುನಃ ಬಿಜೆಪಿ ಸೇರುವ ನಿರ್ಧಾರವನ್ನು ಏಕೆ ಕೈಗೊಂಡರೋ ಗೊತ್ತಿಲ್ಲ. ಅವರು ಬಿಜೆಪಿಗೆ ಹೋಗಿರುವುದು ವೈಯಕ್ತಿಕವಾಗಿ ಬೇಸರವಾಗಿದೆ ಎಂದು ಸಚಿವ ಬಿ.ನಾಗೇಂದ್ರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೆಟ್ಟರ್ ಅವರ ನೇತೃತ್ವದಲ್ಲಿ ಮಾಜಿ ಸಚಿವ ಶಂಕರ ಮುನೇನಕೊಪ್ಪ ಸೇರಿ ಹಲವರು ಕಾಂಗ್ರೆಸ್‌ಗೆ ಬರುವವರಿದ್ದರು. ಈ ಕುರಿತು ಮುನೇನಕೊಪ್ಪ ಅವರೇ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿ, ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಬಂದಿದ್ದ ಶೆಟ್ಟರ್ ಅವರನ್ನು ಪಕ್ಷ ಉತ್ತಮವಾಗಿಯೇ ನಡೆಸಿಕೊಂಡಿದೆ. ಕಳೆದ ಚುನಾವಣೆಯಲ್ಲಿ ಟಿಕೆಟ್ ನೀಡಿ ಕಣಕ್ಕಿಳಿಸಿತ್ತು. ಸೋತರೂ, ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತು. ಆದರೂ, ಅವರು ಬಿಜೆಪಿಗೆ ಹೋಗುವ ನಿರ್ಧಾರವನ್ನು ಏಕೆ ಕೈಗೊಂಡಿದ್ದಾರೋ, ಏನೇನು ಒತ್ತಡಗಳಿವೆಯೋ ಗೊತ್ತಿಲ್ಲ ಎಂದ ನಾಗೇಂದ್ರ, ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ. ಇಲ್ಲಿ ಹಂತ-ಹಂತವಾಗಿ ಅ ಧಿಕಾರ ಸಿಗುತ್ತಿತ್ತು. ತಾಳ್ಮೆ ವಹಿಸಬೇಕಿತ್ತು ಎಂದರು.
ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಪ್ರಭಾವಿಯಾಗಿರುವ ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ಬಳ್ಳಾರಿ ಭಾಗದಲ್ಲಿ ಯಾವುದೇ ಪರಿಣಾಮ ಬೀರಲ್ಲ. ನಮ್ಮಲ್ಲೂ ಲಿಂಗಾಯತ ಸಮುದಾಯದ ಸಚಿವರಾದ ಈಶ್ವರಖಂಡ್ರೆ, ಎಸ್.ಎಸ್.ಮಲ್ಲಿಕಾರ್ಜುನ, ಎಂ.ಬಿ.ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ ಸೇರಿ ಹಲವಾರು ಪ್ರಭಾವಿ ಮುಖಂಡರು ಇದ್ದಾರೆ ಎಂದ ಅವರು, ಲಕ್ಷ್ಮಣ ಸವದಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.
ಸಚಿವ ಕೆ.ಎನ್.ರಾಜಣ್ಣ ಅವರು ಹೈಕಮಾಂಡ್‌ಗೆ ವಿರೋ ಧಿಸಿಲ್ಲ. ಅವರು ಹಿರಿಯರಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ವಿಚಾರಧಾರೆಗಳಿವೆ ಎಂದಿದ್ದಾರೆ. ಹಾಸನ ಜಿಲ್ಲೆಯ ಉಸ್ತುವಾರಿ ಅವರಿಗೆ ನೀಡಿದ್ದು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದಾಗಿ ಕಂಕಣ ತೊಟ್ಟಿದ್ದಾರೆ. ಅಲ್ಲದೇ, ನಿಗಮ-ಮಂಡಳಿಗಳಿಗೆ ಶಾಸಕರನ್ನು ನೇಮಿಸುತ್ತಿರುವುದು ಸಚಿವರಿಗೆ ಯಾವುದೇ ಅಸಮಾಧಾನವಿಲ್ಲ. ಪರಿಶಿಷ್ಟ ವರ್ಗಗಳ ನಿಗಮ-ಮಂಡಳಿಗೆ ಶಾಸಕ ಬಸವರಾಜ ದದ್ದಲ್‌ರನ್ನು ನೇಮಕ ಮಾಡಿರುವುದನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.
ನಗರ ಶಾಸಕ ನಾರಾ ಭರತ್‌ರೆಡ್ಡಿ, ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ, ಮೇಯರ್ ಬಿ.ಶ್ವೇತಾ, ಉಪಮೇಯರ್ ಬಿ.ಜಾನಕಮ್ಮ ಸೇರಿ ಹಲವರು ಇದ್ದರು.