Advertisement

ದೇಶದ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸಿಎಂ…ಅಲ್ಲಿಯೂ ನಾಯಕತ್ವ ಬದಲಾವಣೆಗಾಗಿ ಪಟ್ಟು!

06:17 PM Aug 26, 2021 | ನಾಗೇಂದ್ರ ತ್ರಾಸಿ |

ದೇಶದಲ್ಲಿರುವ 31 ರಾಜ್ಯಗಳ ಪೈಕಿ ಕೇವಲ ಆರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಇದರಲ್ಲಿ ಪಂಜಾಬ್, ರಾಜಸ್ಥಾನ್ ಮತ್ತು ಚತ್ತೀಸ್ ಗಢ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಮುಖ್ಯಮಂತ್ರಿಗಳಿದ್ದು, ಜಾರ್ಖಡ್, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಮೈತ್ರಿಯೊಂದಿಗೆ ಅಧಿಕಾರ ಹಂಚಿಕೊಂಡಿದೆ.

Advertisement

ಮುಖ್ಯಮಂತ್ರಿ ಬದಲಾವಣೆ ಕೂಗು:

ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನದೇ ಮುಖ್ಯಮಂತ್ರಿಯನ್ನು ಹೊಂದಿದೆ. ಪಕ್ಷದೊಳಗಿನ ಆಂತರಿಕ ಜಗಳ, ಅಧಿಕಾರ ಹಂಚುವಿಕೆ ಕಾಂಗ್ರೆಸ್ ಪಕ್ಷಕ್ಕೆ ಸವಾಲಾಗಿ ಪರಿಣಮಿಸಿದೆ. ಆ ನಿಟ್ಟಿನಲ್ಲಿ ಪಂಜಾಬ್, ಚತ್ತೀಸ್ ಗಢ ಹಾಗೂ ರಾಜಸ್ಥಾನ್ ಸೇರಿದಂತೆ ಮೂರು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಬೀಳತೊಡಗಿದೆ.

ಪಂಜಾಬ್ ನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪಕ್ಷದೊಳಗೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಬಳಿಕ ನವಜೋತ್ ಸಿಂಗ್ ಸಿಧು, ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡ ನಂತರ ಆಂತರಿಕ ಕಚ್ಚಾಟ ಹೆಚ್ಚಳವಾಗಿತ್ತು. ಪ್ರತಿಯೊಂದು ಸಂದರ್ಭದಲ್ಲಿ ಅಮರಿಂದರ್ ಸಿಂಗ್ ಮತ್ತು ನವಜ್ಯೋತ್ ಸಿಂಗ್ ಸಿಧು ನಡುವೆ ಜಟಾಪಟಿ ಮುಂದುವರಿಯುತ್ತಲೇ ಇದೆ.

ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಬೇಕೆಂದು 22 ಶಾಸಕರು ಬಂಡಾಯ ಸಾರಿದ್ದರು ಕೂಡಾ, ಉಳಿದ ಶಾಸಕರು ಅಮರೀಂದರ್ ಸಿಂಗ್ ಗೆ ಬೆಂಬಲ ನೀಡಿದ್ದರು. ಅಲ್ಲದೇ ಕಾಂಗ್ರೆಸ್ ಹೈಕಮಾಂಡ್ ಕೂಡಾ ಅಮರೀಂದರ್ ಸಿಂಗ್ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದೆ. ಏತನ್ಮಧ್ಯೆ ಪಂಜಾಬ್ ಬಿಕ್ಕಟ್ಟು ಮುಗಿದ ಅಧ್ಯಾಯ ಎಂದು ಕಾಂಗ್ರೆಸ್ ಹೇಳಿದ್ದರೂ ಕೂಡಾ ನವಜ್ಯೋತ್ ಸಿಂಗ್ ಸಿಧು ತಮ್ಮ ಬಂಡಾಯವನ್ನು ಮುಂದುವರಿಸಿದ್ದಾರೆ.

Advertisement

ಚತ್ತೀಸ್ ಗಢದಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿದ್ದು, 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಿದ ನಂತರ ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಆಧಾರದ ಮೇಲೆ ಮುಖ್ಯಮಂತ್ರಿ ಹುದ್ದೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಟಿಎಸ್ ಸಿಂಗ್ ದೇವ್ ಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಚತ್ತೀಸ್ ಗಢದ ಶಾಸಕರ ಪೈಕಿ ಸಿಂಗ್ ಶ್ರೀಮಂತ ಶಾಸಕರಾಗಿದ್ದಾರೆ. ಇದೀಗ ಮುಖ್ಯಮಂತ್ರಿಯಾಗಿದ್ದ ಭೂಪೇಶ್ ಬಾಘೇಲ್ ಅವರು ಎರಡೂವರೆ ವರ್ಷಗಳ ಕಾಲ ಅವಧಿ ಪೂರ್ಣಗೊಂಡಿದ್ದು, ಟಿಎಸ್ ಸಿಂಗ್ ಗೆ ಅಧಿಕಾರ ಬಿಟ್ಟುಕೊಡಬೇಕಾಗಿದೆ. ಆದರೆ ಬಾಘೇಲ್ ಅವರು ನಿರಾಕರಿಸುತ್ತಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.

ಚತ್ತೀಸ್ ಗಢ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ ಸಂದರ್ಭದಲ್ಲಿ ಭೂಪೇಶ್ ಬಾಘೇಲ್ ಚತ್ತೀಸ್ ಗಢ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗಿಳಿಯಲು ಭೂಪೇಶ್ ನಿರಾಕರಿಸುತ್ತಿದ್ದಾರೆ.

ರಾಜಸ್ಥಾನದಲ್ಲಿಯೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಅಧಿಕಾರದ ಜಂಗೀಕುಸ್ತಿ ನಡೆದಿದ್ದು, ಸಾಕಷ್ಟು ಬೆಳವಣಿಗೆಗೆ ಕಾರಣವಾಗಿತ್ತು. ರಾಹುಲ್ ಗಾಂಧಿಯ ಆಪ್ತ ವಲಯದಲ್ಲಿ ಸಚಿನ್ ಪೈಲಟ್ ಗುರುತಿಸಿಕೊಂಡಿದ್ದು. ಕಳೆದ ವರ್ಷ ಬಂಡಾಯ ಸಾರಿದ್ದ ಪೈಲಟ್ ಗೆ ಸುಮಾರು 24ಕ್ಕೂ ಅಧಿಕ ಮಂದಿ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದರು.

ಕೊನೆಗೆ ಪ್ರಿಯಾಂಕಾ ಗಾಂಧಿ ಮಧ್ಯಪ್ರವೇಶಿಸುವ ಮೂಲಕ ಪೈಲಟ್ ಮತ್ತು ಗೆಹ್ಲೋಟ್ ನಡುವಿನ ಜಟಾಪಟಿಗೆ ತಾತ್ಕಾಲಿಕ ತಡೆ ಬಿದ್ದಂತಾಗಿತ್ತು. ಊಹಾಪೋಹಗಳ ಪ್ರಕಾರ ಒಂದು ವೇಳೆ ಗೆಹ್ಲೋಟ್ ತಮ್ಮ ಸಂಪುಟದಲ್ಲಿ ಪೈಲಟ್ ಅವರ ನಿಷ್ಠರಿಗೆ ಸ್ಥಾನ ಕೊಡದೇ ಹೋದಲ್ಲಿ ರಾಜಸ್ಥಾನ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next