ಬೆಂಗಳೂರು: ಗೃಹಜ್ಯೋತಿ ಯೋಜನೆಯಲ್ಲಿ ಮನೆ ಮಾಲಕರು ಹಾಗೂ ಬಾಡಿಗೆದಾರರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಇಲಾಖೆಯ 2.14 ಕೋಟಿ ಗ್ರಾಹಕರಿಗೂ ಈ ಸೌಲಭ್ಯ ಅನ್ವಯವಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರಿಗೆ ಅನುಕೂಲ ಆಗಲಿದೆ. ವಿಪಕ್ಷಗಳು ಒಳ್ಳೆಯ ಯೋಜನೆಗಳ ಬಗ್ಗೆ ಯಾವಾಗಲೂ ಟೀಕೆ ಮಾಡುತ್ತವೆ. ಆದರೆ ಈಗ ಜನ ನಮಗೆ ಬೆಂಬಲ ಕೊಟ್ಟಿದ್ದಾರೆ. ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದವರು ಯಾರು? ಎಂಬುದು ಜನರಿಗೆ ಗೊತ್ತಿದೆ. ಅದೇ ಕಾರಣಕ್ಕೆ ಸರಕಾರವನ್ನು ಬದಲಾವಣೆ ಮಾಡಿದ್ದಾರೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಇಲ್ಲಿ ಬಾಡಿಗೆದಾರರು ಮಾಲಕರು ಎನ್ನುವ ವಿಚಾರ ಬರುವುದಿಲ್ಲ. ಈಗ 2 ಕೋಟಿ 14 ಲಕ್ಷ ಗ್ರಾಹಕರಿದ್ದಾರೆ. ಅವರಿಗೆ ಬಿಲ್ ಕೊಡುತ್ತಿದ್ದೇವೆ. ಆರ್‌ಆರ್ ನಂಬರ್ ಆಧಾರದ ಮೇಲೆ ಬಿಲ್ ಜನರೇಟ್ ಮಾಡುತ್ತೇವೆ. ಹೀಗಾಗಿ ಬಾಡಿಗೆದಾರರಿಗೂ ಯೋಜನೆಯ ಲಾಭ ಸಿಗುತ್ತದೆ. ಮನೆಯಲ್ಲಿ ಯಾರು ಇರ್ತಾರೋ ಅವರಿಗೆ ಉಚಿತ ವಿದ್ಯುತ್ ಸಿಗಲಿದೆ. ಎರಡು ಕೋಟಿ ಹದಿನಾಲ್ಕು ಲಕ್ಷದಲ್ಲಿ ಶೇ. 94ರಿಂದ ಶೇ. 96 ರಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ನಮ್ಮ ಯೋಜನೆಗೆ 13 ಸಾವಿರ ಕೋಟಿ ರೂ. ವರ್ಷಕ್ಕೆ ಬೇಕಾಗುತ್ತದೆ. ಸರಕಾರದಿಂದಲೇ ಅನುದಾನ ಕೊಡಲಾಗುತ್ತದೆ. 200 ಯೂನಿಟ್‌ವರೆಗೂ ರಿಯಾಯಿತಿ ಕೊಡಲು ತೀರ್ಮಾನಿಸಿದ್ದೇವೆ. ಸರಾಸರಿ ಲೆಕ್ಕಕ್ಕೆ 12 ತಿಂಗಳು ತೆಗೆದುಕೊಂಡಿರುವುದಕ್ಕೂ ಕಾರಣ ಇದೆ. ಬೇಸಗೆಕಾಲ, ಚಳಿಗಾಲ ಹೀಗೆ ಬಳಕೆಯಲ್ಲಿ ವ್ಯತ್ಯಾಸ ಇರುತ್ತದೆ. ಹಾಗಾಗಿ ಅವರು ಬಳಸುವ ವಿದ್ಯುತ್ ಮೇಲೆ ಶೇ. 10ರಷ್ಟು ಹೆಚ್ಚು ಬಳಸುವ ಅವಕಾಶ ನೀಡಿದ್ದೇವೆ. ಅದಕ್ಕಿಂತ ಜಾಸ್ತಿ ಬಳಸಿದರೆ ಅದಕ್ಕೆ ಶುಲ್ಕ ನೀಡಬೇಕಾಗುತ್ತದೆ. ಸರಾಸರಿ 200 ಯೂನಿಟ್ ಬಳಕೆ ಇದ್ದರೆ ಆ ಪ್ರಮಾಣ ದಾಟಿದ ಮೇಲೆ ಎಷ್ಟು ಹೆಚ್ಚಾಗಿ ಬಳಕೆ ಮಾಡುತ್ತಾರೋ ಅಷ್ಟು ಮಾತ್ರ ಬಿಲ್ ಕಟ್ಟಬೇಕಾಗುತ್ತದೆ ಎಂದು ಹೇಳಿದರು.