ವಾಡಿ: ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಡಿ ಪ್ರಕಟಿಸಿರುವ ಉಚಿತ ಬಸ್ ಪ್ರಯಾಣದಿಂದ ರಾಜ್ಯದ ದೇವಸ್ಥಾನಗಳ ಹುಂಡಿಗಳು ಭರ್ತಿಯಾಗುತ್ತಿವೆ ಎಂದು ಪಂಚಾಯತರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮಂಗಳವಾರ ಕೊಲ್ಲೂರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕೊಲ್ಲೂರ ಬನ್ನೇಟಿ ಗ್ರಾಮದ ರಸ್ತೆ ಸುಧಾರಣೆ ಸೇರಿದಂತೆ ತರ್ಕಸ್‌ಪೇಟೆ, ಕಮರವಾಡಿ, ಕೈಲಾಸನಗರ, ಕುಂದನೂರ, ರಾಮನಗರ ತಾಂಡಾ, ಕಮರವಾಡಿ ಗ್ರಾಮಗಳಲ್ಲಿ ಒಟ್ಟು 17.98 ಕೋಟಿ ರೂ. ಅನುದಾನದಡಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರ ಇದ್ದಾಗ ದೇವಸ್ಥಾನಗಳಿಗೆ ಬನ್ನಿ ಎಂದು ಕರೆದರೂ ಭಕ್ತರು ಹೋಗುತ್ತಿರಲಿಲ್ಲ. ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಉಚಿತ ಬಸ್ ಪ್ರಯಾಣದಿಂದ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ನಾಡಿನ ವಿವಿಧ ಪ್ರಖ್ಯಾತ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಹೀಗೆ ದೇವಸ್ಥಾನಕ್ಕೆ ಭೇಟಿ ನೀಡುವ ಮಹಿಳೆಯರು ಕಾಣಿಕೆಯಾಗಿ ದೇವರ ಹುಂಡಿಗೆ ಹಣ ಹಾಕುತ್ತಾರೆ. ಇದರಿಂದ ದೇವರ ಹುಂಡಿ ಮತ್ತು ಪೂಜಾರಿಗಳ ಆರತಿ ತಟ್ಟೆಗೆ ಅನಿರೀಕ್ಷಿತ ಹಣ ಬೀಳುತ್ತಿದೆ. ಪರಿಣಾಮ ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗ್ಗಡೆಯವರೇ ಸರ್ಕಾರಕ್ಕೆ ಪತ್ರ ಬರೆದು ಶಕ್ತಿ ಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುವ ಜತೆಗೆ ಧನ್ಯವಾದ ತಿಳಿಸಿದ್ದಾರೆ ಎಂದರು.
ಬಸವ ತತ್ವದಡಿ ರಾಜ್ಯದ ಪ್ರತಿ ಪಂಚಾಯತಿ ಕೇಂದ್ರ ಸ್ಥಾನಗಳಲ್ಲಿ ಅರಿವು ಕೇಂದ್ರ ಹೆಸರಿನಡಿ ಹೈಬ್ರಿಡ್ ಡಿಜಿಟಲ್ ಗ್ರಂಥಾಲಯ ತೆರೆಯಲಾಗುತ್ತಿದೆ. ಪ್ರತಿ ಗ್ರಾಮಗಳ ಸಂಪರ್ಕ ರಸ್ತೆಗಳ ಸುಧಾರಣೆ ಮತ್ತು ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.
ಚಿತ್ತಾಪುರ ತಹಶೀಲ್ದಾರ ಸೈಯದ್ ಷಾಷಾವಲಿ, ಬಿಇಒ ಸಿದ್ದವೀರಯ್ಯ ರುದ್ನೂರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭಾ, ಏಕಲವ್ಯ ಪ್ರಾಂಶುಪಾಲ ಗಂಗಾಧರ ಅಂಕಲಗಿ, ತಾಲೂಕು ಪಶು ಆರೋಗ್ಯಾಧಿಕಾರಿ ಶಂಕರ ಕಣ್ಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ, ಮುಖಂಡರಾದ ಭೀಮಣ್ಣ ಸಾಲಿ, ಶಿವಾನಂದ ಪಾಟೀಲ, ಅರವಿಂದ ಚವ್ಹಾಣ, ವೀರಣ್ಣಗೌಡ ಪರಸರೆಡ್ಡಿ, ಕೃಷ್ಣಾರೆಡ್ಡಿ ಈರಾರೆಡ್ಡಿ, ಅಬ್ದುಲ್ ಅಜೀಜ್‌ಸೇಠ ರಾವೂರ, ಶರಣು ಸಾಹು ಬಿರಾಳ, ಗುರುಗೌಡ ಇಟಗಿ, ಬಸವರಾಜಗೌಡ ಮಾರಡಗಿ, ಮಲ್ಲಿನಾಥಗೌಡ ಸನ್ನತಿ, ಭೀಮಾಶಂಕರ ತೇಲಕರ, ಸೂರ್ಯಕಾಂತ ರದ್ದೇವಾಡಿ, ಶರಣಗೌಡ ತರ್ಕಸ್‌ಪೇಟೆ, ಶರಣು ವಾರದ್, ಸಾಯಬಣ್ಣ ಬನ್ನೇಟಿ, ದೇವೆಗೌಡ ತೆಲ್ಲೂರ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು. ಭಾಗಪ್ಪ ಯಾದಗಿರಿ ನಿರೂಪಿಸಿ, ವಂದಿಸಿದರು.